ಬೀದರ್: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಕೊಂಡ ರೈತರಿಗೆ, ಬೆಳೆ ಹಾನಿಯಾದ ಬಳಿಕ ಪರಿಹಾರ ನೀಡಬೇಕಾದ ಯೂನಿವರ್ಸಲ್ ಸೋಂಪೋ ಕಂಪೆನಿಯು, ರೈತರಿಗೆ ಸಕಾಲಕ್ಕೆ ಸೂಕ್ತ ಪರಿಹಾರ ಧನ ನೀಡದೇ ಸತಾಯಿಸುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಈ ಕಂಪೆನಿ ಲೂಟಿ ಹೊಡೆಯುತ್ತಿದೆ ಎಂದು ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು. ಜಿಪಂನಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಖಂಡ್ರೆ ಅವರು,2018-19ನೇ ಸಾಲಿನ 284 ರೈತರಿಗೆ 23.02 ಕೋಟಿ ರೂ. ಪರಿಹಾರ ಇನ್ನೂ ಬರಬೇಕಿದೆ ಎಂದರು. ಮೂರು ಬಾರಿ ಪ್ರವಾಹ ಬಂದು ಬೆಳೆ ಹಾಳಾಗಿದೆ. ರೈತರಿಗೆ ಶೀಘ್ರ ಪರಿಹಾರ ನೀಡುವ ಬದಲು ಹಣವನ್ನು ಕಳೆದ ನಾಲ್ಕು ತಿಂಗಳಿಂದ ಕಂಪೆನಿಯವರು ಇಟ್ಟುಕೊಂಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ,ಕ್ರಮ ಕೈಗೊಳ್ಳಬೇಕು ಎಂದರು. ಪರಿಹಾರದ ಹಣ ನೀಡಲು ನಾಲ್ಕು ತಿಂಗಳು ತಡವಾಗಿದ್ದು, ನಾಲ್ಕು ತಿಂಗಳ ಬಡ್ಡಿ ಸಮೇತ ರೈತರಿಗೆ ಕೊಡಿಸಬೇಕು ಎಂದು ಖಂಡ್ರೆ ಒತ್ತಾಯಿಸಿದರು. ಈ ಮಧ್ಯೆ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ ಅವರು, ಬೆಳೆ ವಿಮೆ ಕಂಪೆನಿಯವರು ಪರಿಹಾರ ನೀಡಲು ಹಿಂದೆ ಸರಿಯುತ್ತಾರೆ. ಆದರೆ, ರಾಜ್ಯ, ಕೇಂದ್ರ ಮಟ್ಟದಲ್ಲಿ ಸಭೆ ನಡೆಸಿ, ಪರಿಹಾರ ಕೊಡಿಸಲಾಗುತ್ತಿದೆ. ಈ ವಿಷಯದಲ್ಲಿ ಈಶ್ವರ್ ಖಂಡ್ರೆ ಹೇಳುವ ಮಾತಿನಲ್ಲಿ ಸ್ವಲ್ಪ ಸತ್ಯವಿದೆ ಎಂದರು. ಇದಕ್ಕೆ ಸ್ಪಂದಿಸಿದ ಖಂಡ್ರೆ, ನಾನು ಹೇಳುವುದರಲ್ಲಿ ಸಂಪೂರ್ಣ ಸತ್ಯವಿದೆ ಎಂದು ತಿಳಿಸಿದರು. ಈ ವೇಳೆ ಯೂನಿವರ್ಸಲ್ ಸೋಂಪೋ ಕಂಪೆನಿಯ ಜಿಲ್ಲಾ ಮಟ್ಟದ ಅಧಿಕಾರಿಗೆ ಮಾತನಾಡಿಸಿದಾಗ ಸೂಕ್ತ ಮಾಹಿತಿ ಲಭಿಸಲಿಲ್ಲ. ಇದರಿಂದ ಕೆರಳಿದ ಈಶ್ವರ್ ಖಂಡ್ರೆ ಅವರು, ಬೆಳೆ ಹಾನಿಯಾದ ಮೂರು ದಿನಗಳ ಒಳಗೆ ರೈತರು ಮಾಹಿತಿ ನೀಡಿಲ್ಲ ಎಂದು ಅಧಿಕಾರಿ ಹೇಳುತ್ತಿದ್ದಾರೆ. ಕಂಪೆನಿಯ ಟೋಲ್ ಫ್ರೀ ನಂಬರ್ ಬಂದ್ ಮಾಡಿದ್ದರು. ಲಿಂಕ್ ಕೈಕೊಟ್ಟಿತ್ತು. ಅರ್ಜಿ ನೀಡಿದರೂ ಪರಿಗಣಿಸುತ್ತಿಲ್ಲ. ಹೀಗಾಗಿ, ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಪುನರುಚ್ಛರಿಸಿದರು. ಶಾಸಕ ರಾಜಶೇಖರ ಪಾಟೀಲ್ ಅವರೂ ಇದಕ್ಕೆ ದನಿಗೂಡಿಸಿ, ಬೆಳೆ ವಿಮೆ ಪರಿಹಾರ ರೈತರಿಗೆ ಸೂಕ್ತವಾಗಿ, ಸಕಾಲದಲ್ಲಿ ದೊರಕುತ್ತಿಲ್ಲ ಎಂದರು. ಅಲ್ಲದೆ, ಜಿಲ್ಲೆಯಲ್ಲಿ ಬೇಡಿಕೆ ಇರುವಷ್ಟು ಟಾರ್ಪಲಿನ್, ಹನಿ ನೀರಾವರಿ ಮತ್ತಿತರೆ ಯಂತ್ರಗಳನ್ನು ಕೃಷಿ ಇಲಾಖೆಯವರು ನೀಡಬೇಕು ಎಂದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿಎಚ್ ಮಾತನಾಡಿ, ಟಾರ್ಪಲಿನ್‌ಗಾಗಿ 8600 ಅರ್ಜಿಗಳು ಬಂದಿವೆ, 15000ಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂಬ ಮಾಹಿತಿ ನೀಡಿದರು. ಒಂದೂವರೆ ಗಂಟೆ ತಡವಾಗಿ ಸಭೆ ಆರಂಭ: ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಕೆಡಿಪಿ ಸಭೆಯು ಮಧ್ಯಾಹ್ನ 12.30ಕ್ಕೆ ಆರಂಭವಾಯಿತು. ಉಸ್ತುವಾರಿ ಸಚಿವರು ಸಭೆಯ ಸಭಾಂಗಣಕ್ಕೆ ಬರಲು ಒಂದೂವರೆ ಗಂಟೆ ತಡ ಮಾಡಿದರು. ಅಧಿಕಾರಿಗಳು ಕಾದು ಕಾದು ಸುಸ್ತಾಗಿದ್ದರು. ಜಿಪಂ ಕಚೇರಿಗೆ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ನಿಂತು ಹೈರಾಣಾಗಿದ್ದರು. ಕಬ್ಬಿನ ರಿಕವರಿ, ತನಿಖೆಗೆ ತಂಡ: ಬೀದರ್ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ರಿಕವರಿ ಕುರಿತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೆಮಿಸ್ಟ್‌ಗಳನ್ನು ಒಳಗೊಂಡ ತಜ್ಞರ ತಂಡವು ಜಿಲ್ಲೆಯ ಸಕ್ಕರೆ ಕಾರಖಾನೆಗಳಿಗೆ ಶೀಘ್ರ ಭೇಟಿ ನೀಡಿ ತನಿಖೆ ನಡೆಸಿ, ವರದಿ ನೀಡಲಿದೆ ಎಂದು ಸಚಿವ ಮುನೇನಕೊಪ್ಪ ಹೇಳಿದರು. ಬ್ರಿಮ್ಸ್ ಬಗ್ಗೆ ಕ್ರಮ ಕೈಗೊಂಡು, ನ್ಯಾಯ ಒದಗಿಸುವೆ ಎಂದರಲ್ಲದೆ, ಅನುಭವ ಮಂಟಪಕ್ಕೆ ಅನುದಾನಕ್ಕೆ ಅನುಮೋದನೆಯನ್ನು ಸಂಪುಟದಲ್ಲಿ ಪಡೆದುಕೊಂಡಿದ್ದೇನೆ ಎಂದರು. ಕಳಪೆ ಬೀಜ, ಕಂಪೆನಿಗಳಿಗೆ ಕಪ್ಪು ಪಟ್ಟಿಗೆ ಸೇರಿಸಿ ಅನುಪಾಲನ ವರದಿ ಕುರಿತ ಚರ್ಚೆ ವೇಳೆ, ಒಟ್ಟಾರೆ 17 ಮಾದರಿಯ ಬೀಜಗಳು ಕಳಪೆಯಾಗಿದ್ದವು. ಈ ಕುರಿತು ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿಎಚ್ ಹೇಳಿದರು. ಆ 17 ಕಂಪೆನಿಗಳು ಯಾವವು ಎಂದು ಎಂಎಲ್‌ಸಿ ಅರವಿಂದಕುಮಾರ ಅರಳಿ ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಉಸ್ತುವಾರಿ ಸಚಿವ ಮುನೇನಕೊಪ್ಪ ಅವರು, 17 ಕಂಪೆನಿಗಳ ಪಟ್ಟಿ ನೀಡಿ. ಕೃಷಿ ಇಲಾಖೆಯ ಸಚಿವರೊಂದಿಗೆ ಮಾತನಾಡಿ, ಕ್ರಮಕ್ಕೆ ಆಗ್ರಹಿಸುವೆ ಎಂದರು. ಕೃಷಿ ಇಲಾಖೆಯವರು ಈ ಕಂಪೆನಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಡಾ.ಶೈಲೇಂದ್ರ ಬೆಲ್ದಾಳೆ ಪ್ರಶ್ನಿಸಿದರು. 8 ರೈತರ ಆತ್ಮಹತ್ಯೆ ಪ್ರಕರಣಗಳು ರಿಜೆಕ್ಟ್ ಆಗಿವೆ. ಇವನ್ನು ಪುನರ್ ಪರಿಶೀಲಿಸಿ, ಪರಿಹಾರ ನೀಡಿ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಉಸ್ತುವಾರಿ ಸಚಿವರು ಮಾತನಾಡಿ,ಆತ್ಮಹತ್ಯೆ ಪ್ರಕರಣಗಳನ್ನು ಕಾಲಮಿತಿಯೊಳಗೆ ಮುಗಿಸಿ,ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಸೂಚಿಸಿದರು. ಬಿಎಸ್‌ಎಸ್‌ಕೆಗಾಗಿ ಸಿಎಂ ಬಳಿ ಚರ್ಚಿಸೋಣ ಬಿಎಸ್‌ಎಸ್‌ಕೆ ಕಾರಖಾನೆ ಪುನಶ್ಚೇತನಕ್ಕಾಗಿ 20 ಕೋಟಿ ರೂ. ಅನುದಾನ ನೀಡಬೇಕು ಎಂದು ಶಾಸಕ ರಾಜಶೇಖರ ಪಾಟೀಲ್, ರಹಿಂ ಖಾನ್, ಕೆಎಸ್‌ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಕ್ಕರೆ ಸಚಿವರೂ ಆದ ಮುನೇನಕೊಪ್ಪ ಅವರು, ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಸೇರಿ ಸಿಎಂ ಬೊಮ್ಮಾಯಿ ಅವರ ಮನವೊಲಿಸೋಣ. ನಾನು ಖುದ್ದು ಬೊಮ್ಮಾಯಿಗೆ ಮಾತನಾಡುವೆ ಎಂದರು. ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಕಾರಖಾನೆಯಿದೆ. ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. 20 ಕೋಟಿ ಅನುದಾನ ನೀಡಿ ಎಂದರು.ಅಲ್ಲದೆ, ಈ ಹಿಂದೆ 64 ಅಡಿ ತನಿಖೆಯಾಗಿದೆ. ಕಾರಖಾನೆಯಲ್ಲಿ ಯಾರು ಅವ್ಯವಹಾರ ಮಾಡಿದ್ದರೋ ಅವರನ್ನು ಜೈಲಿಗೆ ಹಾಕಿ ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ್ ಆಗ್ರಹಿಸಿದರು. ಶಾಸಕ ಈಶ್ವರ್ ಖಂಡ್ರೆ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿಎಸ್‌ವೈ ಅವರು ಬಿಎಸ್‌ಎಸ್‌ಕೆಗೆ ಅನುದಾನ ನೀಡುವುದಾಗಿ ಈ ಹಿಂದೆ ಘೋಷಿಸಿದ್ದಾರೆ. ಹೀಗಾಗಿ, ಕಾರಖಾನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪುನಶ್ಚೇತನಕ್ಕೆ ಸರಕಾರ ಮುಂದಾಗಬೇಕು ಎಂದರು. ಬೊಮ್ಮಾಯಿ ಗೌರವ, ಸಿದ್ದು ಅಗೌರವ ಕುರಿತ ಚರ್ಚೆ ಶಾಸಕ ರಾಜಶೇಖರ ಪಾಟೀಲ್ ಅವರು ಮಾತನಾಡಿ, ಸಿಎಂ ಬೊಮ್ಮಾಯಿ ಅವರಿಗೆ ಭೇಟಿಯಾದಾಗ ನಮ್ಮನ್ನು ಗೌರವದಿಂದ ಕಂಡರು. ಒಳ್ಳೆಯದಾಗಿ ಸ್ಪಂದಿಸಿದರು. ಉಪ್ಪಿಟ್ಟು ತಿನ್ನಿಸಿದರು ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವ ಭಗವಂತ ಖೂಬಾ ಅವರು, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ನಾವು ಹೋದಾಗ ನಮ್ಮನ್ನು ಅಗೌರವದಿಂದ ಕಾಣಿದ್ದಾರೆ. ನಿಮ್ಮ ಸರಕಾರ ಹಾಗೂ ನಮ್ಮ ಡಬಲ್ ಎಂಜಿನ್ ಸರಕಾರದ ನಡುವಿನ ವ್ಯತ್ಯಾಸ ಇದೇ ಆಗಿದೆ ನೋಡಿ ಎಂದರು. ಕೂಡಲೇ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ ಅವರು, ಸಿದ್ದರಾಮಯ್ಯನವರು ಗೌರವ ನೀಡಿಲ್ಲ ಎನ್ನುವುದು ಶುದ್ಧ ಸುಳ್ಳು.ಅನುಭವ ಮಂಟಪ, ವಿಮಾನಯಾನ ಸಭೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಎಲ್ಲರನ್ನೂ ಸಿದ್ಧರಾಮಯ್ಯನವರು ಗೌರವದಿಂದಲೇ ಕಾಣಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಕೋವಿಡ್‌ನಿಂದ ಮೃತರಾದ ಎಲ್ಲರಿಗೂ ಪರಿಹಾರ ನೀಡಿ ಕೋವಿಡ್ ಸೋಂಕಿನಿಂದ ಮೃತರಾದ ಹಾಗೂ ಆರಂಭದಿಂದ ಪಾಸಿಟಿವ್ ಬಂದು, ಬಳಿಕ ನೆಗೆಟಿವ್ ಆಗಿ ಮೃತಪಟ್ಟ ಹೀಗೆ ಎಲ್ಲ ಸೇರಿ ಜಿಲ್ಲೆಯ 1168 ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಕೆಲಸ ಆಗಬೇಕು ಎಂದು ಶಾಸಕ ಈಶ್ವರ್ ಖಂಡ್ರೆ ಹೇಳಿದರು. ಇದಕ್ಕೆ ಸ್ಪಂದಿಸಿದ ಡಿಸಿ ಗೋವಿಂದರೆಡ್ಡಿ ಅವರು, ಜಿಲ್ಲೆಯ 1671 ಜನ ಮೃತರ ಅರ್ಜಿ ಪ್ರಕ್ರಿಯೆ ಮುಗಿದಿದೆ. ಹಂತ ಹಂತವಾಗಿ ಇವರೆಲ್ಲರಿಗೂ ಪರಿಹಾರ ಸಿಗಲಿದೆ ಎಂದರು. ಬ್ರಿಮ್ಸ್ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗೆ ಸಂಬಳ ನೀಡುವ ಕುರಿತು ಚರ್ಚೆ ಜರುಗಿತು. ಡಿಎಚ್‌ಒ ಡಾ. ರತಿಕಾಂತ ಸ್ವಾಮಿ, ಬ್ರಿಮ್ಸ್ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಮಾಹಿತಿ ನೀಡಿದರು.
from India & World News in Kannada | VK Polls https://ift.tt/eBWds3C