ಲಖನೌ: ಗುಜರಾತ್ನ ಅಹಮದಾಬಾದ್ನಲ್ಲಿ 2008ರಲ್ಲಿ ನಡೆದ ಸರಣಿ ಸ್ಫೋಟದ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯವು ಶಿಕ್ಷೆ ವಿಧಿಸಿದ ಬೆನ್ನಲ್ಲೇ ತೀರ್ಪು ಪ್ರಶ್ನಿಸಿ ಇಬ್ಬರು ಅಪರಾಧಿಗಳು ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಉತ್ತರ ಪ್ರದೇಶದ ಅಜಂಗಢದವರಾದ ಮೊಹಮ್ಮದ್ ಸೈಫ್ ಹಾಗೂ ಆರಿಫ್ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ್ದು, ಇದನ್ನು ಪ್ರಶ್ನಿಸಿ ಅವರ ಕುಟುಂಬಸ್ಥರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ''ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವಾಗಲೇ ತೀರ್ಪು ಪ್ರಕಟವಾಗಿದ್ದು, ಇದು ಮೇಲ್ನೋಟಕ್ಕೆ ಬಿಜೆಪಿಗೆ ಅನುಕೂಲವಾಗುವಂತಿದೆ. ಇಡೀ ಪ್ರಕರಣವೇ ರಾಜಕೀಯ ಪ್ರೇರಿತವಾಗಿದ್ದು, ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ,'' ಎಂದು ಸೈಫ್ ತಂದೆ ಶಾದಾಬ್ ಅಹ್ಮದ್ ಹೇಳಿದ್ದಾರೆ. ಶಾಬಾದ್ ಅಹ್ಮದ್ ಸಮಾಜವಾದಿ ಪಕ್ಷದ ಮುಖಂಡರೂ ಆಗಿದ್ದಾರೆ. ಮತ್ತೊಂದೆಡೆ, ಆರಿಫ್ ಕುಟುಂಬಸ್ಥರು ಸಹ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಅಹಮದಾಬಾದ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಶುಕ್ರವಾರ 38 ಅಪರಾಧಿಗಳಿಗೆ ಹಾಗೂ 11 ಮಂದಿಗೆ ವಿಧಿಸಿದೆ. ಗಲ್ಲುಶಿಕ್ಷೆಗೆ ಈಡಾದವರಲ್ಲಿ ಐವರು ಅಜಂಗಢದವರಾಗಿದ್ದಾರೆ. 2008ರ ಅಹ್ಮದಾಬಾದ್ ಪ್ರಕರಣದ ತ್ವರಿತ ವಿಚಾರಣೆ ಸಲುವಾಗಿ ರಚನೆಯಾದ ವಿಶೇಷ ನ್ಯಾಯಾಲಯವು ಶಿಕ್ಷೆಗೆ ಒಳಗಾದ 49 ಅಪರಾಧಿಗಳ ಪೈಕಿ, 38 ಮಂದಿಗೆ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯ ವಿವಿಧ ನಿಯಮಗಳು ಮತ್ತು ಐಪಿಸಿ ಸೆಕ್ಷನ್ 302ರ ಅಡಿ ಈ ತೀರ್ಪು ಪ್ರಕಟಿಸಲಾಗಿದೆ. ಇನ್ನು ಉಳಿದ 11 ತಪ್ಪಿತಸ್ಥರಿಗೆ ಜೀವಮಾನ ಪರ್ಯಂತ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ಫೋಟದಲ್ಲಿ ಮೃತಪಟ್ಟ ಜನರಿಗೆ ತಲಾ 1 ಲಕ್ಷ ರೂ ಪರಿಹಾರ ನೀಡುವಂತೆ ವಿಶೇಷ ನ್ಯಾಯಾಧೀಶ ಎಆರ್ ಪಟೇಲ್ ಅವರು ತೀರ್ಪು ಪ್ರಕಟಿಸುವ ವೇಳೆ ಸೂಚನೆ ನೀಡಿದ್ದಾರೆ. ಗಂಭೀರ ಗಾಯಗೊಂಡವರಿಗೆ 50,000 ರೂ ಮತ್ತು ಅಲ್ಪಸ್ವಲ್ಪ ಗಾಯಗೊಂಡವರಿಗೆ 25,000 ರೂ ಪರಿಹಾರ ಸೂಚಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ ಶಿಕ್ಷೆಗೆ ಒಳಗಾದ ಏಕೈಕ ಅಪರಾಧಿ ಉಸ್ಮಾನ್ ಅಗರಬತ್ತಿವಾಲಾಗೆ ಕೂಡ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆತನಿಗೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಹೆಚ್ಚುವರಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 8ರಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಧೀಶರು, 78 ಆರೋಪಿಗಳ ಪೈಕಿ 49 ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ಘೋಷಿಸಿದ್ದರು. ಕೊಲೆ, ದೇಶದ್ರೋಹ ಮತ್ತು ದೇಶದ ವಿರುದ್ಧ ಯುದ್ಧಕ್ಕೆ ಪ್ರಚೋದನೆ ಸೇರಿದಂತೆ ಐಪಿಸಿ ಸೆಕ್ಷನ್ನ ವಿವಿಧ ಸೆಕ್ಷನ್ಗಳ ಅಡಿ ಮತ್ತು ಯುಎಪಿಎ, ಸ್ಫೋಟಕ ಪದಾರ್ಥಗಳ ಕಾಯ್ದೆ ಅಡಿ ಶಿಕ್ಷೆ ಪ್ರಕಟಿಸಲಾಗಿದೆ. 2008ರ ಜುಲೈ 26ರಂದು ಅಹ್ಮದಾಬಾದ್ನಲ್ಲಿ ಸರ್ಕಾರಿ ಸ್ವಾಮ್ಯದ ಸಿವಿಲ್ ಆಸ್ಪತ್ರೆ, ಅಹ್ಮದಾಬಾದ್ ಪಾಲಿಕೆ ಸ್ವಾಮ್ಯದ ಎಲ್ಜಿ ಆಸ್ಪತ್ರೆ, ಬಸ್ಗಳು, ನಿಲ್ಲಿಸಿದ್ದ ಬೈಸಿಕಲ್, ಕಾರುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಒಟ್ಟು 22 ಬಾಂಬ್ಗಳು ಸ್ಫೋಟಿಸಿದ್ದವು. ಈ ಸರಣಿ ಸ್ಫೋಟಗಳಲ್ಲಿ 56 ಮಂದಿ ಮೃತಪಟ್ಟಿದ್ದರು. ಸುಮಾರು 200 ಮಂದಿ ಗಾಯಗೊಂಡಿದ್ದರು. ಒಟ್ಟು 24 ಬಾಂಬ್ಗಳಲ್ಲಿ ಕಲೋಲ್ ಹಾಗೂ ನರೋಡಾದಲ್ಲಿದ್ದ ಎರಡು ಬಾಂಬುಗಳು ಸ್ಫೋಟಿಸಿರಲಿಲ್ಲ. ಕೆಲವು ಮಾಧ್ಯಮ ಸಂಸ್ಥೆಗಳಿಗೆ ಇ-ಮೇಲ್ ಕಳುಹಿಸಿದ್ದ ಇಂಡಿಯನ್ ಮುಜಾಹಿದ್ದೀನ್ (ಐಎಂ), ಈ ಕೃತ್ಯಕ್ಕೆ ತಾನೇ ಹೊಣೆ ಎಂದು ಹೇಳಿತ್ತು. ಆವರೆಗೂ ಇಂಡಿಯನ್ ಮುಹಾಜಿದ್ದೀನ್ ಸಂಘಟನೆ ಬಗ್ಗೆ ಯಾರಿಗೂ ತಿಳಿದಿರಲಲ್ಲ. ಒಟ್ಟು 78 ಮಂದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣದಲ್ಲಿ ಸಾಕ್ಷಿದಾರನಾಗಿ ಬದಲಾದ ಅಯಾಜ್ ಸಯ್ಯದ್, ಬೈಸಿಕಲ್ಗಳು ಮತ್ತು ಎಎಂಟಿಎಸ್ ಬಸ್ನಲ್ಲಿ ಬಾಂಬ್ಗಳನ್ನು ಇರಿಸಿದ್ದಾಗಿ ಒಪ್ಪಿಕೊಂಡಿದ್ದ.
from India & World News in Kannada | VK Polls https://ift.tt/yAQ09W2