: ಭಾರತಕ್ಕೆ ಅಕ್ರಮವಾಗಿ ಬಂದು ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಹಿಳೆಗೆ ಪಾಕಿಸ್ತಾನವು ತನ್ನ ದೇಶದ ನೀಡಿದೆ. ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿರುವ ಈಕೆಯನ್ನು ಪಾಕ್ಗೆ ಕರೆಸಿಕೊಳ್ಳುವ ಪ್ರಯತ್ನವೂ ನಡೆದಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಕೇರಳದ ಯುವಕನನ್ನು ಮದುವೆಯಾಗಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸುಮೈರಾ ಎಂಬ ಯುವತಿಯ ಕತೆ ಕುತೂಹಲಕಾರಿಯಾಗಿದೆ. ಕತಾರ್ನಲ್ಲಿ 2016ರಲ್ಲಿ ಈಕೆಗೆ ಕೇರಳದ ಪಾಲಕ್ಕಾಡ್ ಮೂಲದ ಮೊಹಮ್ಮದ್ ಶಿಹಾಬ್ ಎಂಬಾತನ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಪ್ರೇಮವಾಗಿ ಇಬ್ಬರೂ ಮದುವೆಯಾಗಿದ್ದರು. ಸುಮೈರಾ ಮನೆಯವರು ಈ ಮದುವೆಯನ್ನು ಒಪ್ಪದ ಕಾರಣ ಭಾರತಕ್ಕೆ ಬರಲು ನಿರ್ಧರಿಸಿದ್ದರು. ಆದರೆ, ಅಧಿಕೃತ ದಾಖಲೆಗಳನ್ನು ಬಳಸಿ ಭಾರತಕ್ಕೆ ಬರುವುದು ಕಷ್ಟಸಾಧ್ಯವಾಗಿದ್ದರಿಂದ 2016ರ ಸೆಪ್ಟೆಂಬರ್ನಲ್ಲಿ ಅಕ್ರಮ ಮಾರ್ಗದ ಮೂಲಕ ಭಾರತಕ್ಕೆ ಬರಲು ನಿರ್ಧರಿಸಿದ್ದರು. ನೇಪಾಳಕ್ಕೆ ಬಂದು ಅಲ್ಲಿಂದ ಪಶ್ಚಿಮ ಬಂಗಾಳ ತಲುಪಿ, ನಂತರ ಬೆಂಗಳೂರಿಗೆ ಬಂದಿದ್ದರು. ಕುಮಾರಸ್ವಾಮಿ ಲೇಔಟ್ನ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. 2017ರಲ್ಲಿ ಅಕ್ರಮ ವಲಸಿಗರ ಪತ್ತೆಗೆ ಸರಕಾರ ಕಾರ್ಯಾಚರಣೆ ನಡೆಸಿದಾಗ ಕೆಲವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಅವರ ಪೈಕಿ ಈ ಜೋಡಿ ಕೂಡ ಒಂದು. ಆದರೆ ಪೊಲೀಸರು ಬರುತ್ತಿದ್ದಂತೆಯೇ ಮೊಹಮ್ಮದ್ ಶಿಹಾಬ್ ತಪ್ಪಿಸಿಕೊಂಡಿದ್ದ. ಸುಮೈರಾ ಪೊಲೀಸರ ವಶವಾಗಿದ್ದಳು. ಬಳಿಕ ಈಕೆಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆ ವೇಳೆಗಾಗಲೇ ಸುಮೈರಾ ತುಂಬು ಗರ್ಭಿಣಿಯಾಗಿದ್ದಳು. ಜೈಲಿನಲ್ಲಿ ಇರುವಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆಕೆಯನ್ನು ಸಂಪರ್ಕಿಸಲು ಯತ್ನಿಸಿದರೆ ಸಿಕ್ಕಿ ಬೀಳುವ ಭಯದಿಂದ ಪತಿ ಮೊಹಮ್ಮದ್ ಶಿಹಾಬ್ ತಲೆಮರೆಸಿಕೊಂಡೇ ಇದ್ದಾನೆ. ಮೂರು ವರ್ಷಗಳ ಜೈಲಿನ ಶಿಕ್ಷೆ ಮುಗಿಸಿದ ಬಳಿಕ ತನ್ನ ಪುಟ್ಟ ಮಗಳೊಂದಿಗೆ ಸುಮೈರಾ ಬೆಂಗಳೂರಿನ ಬಂಧನ ಕೇಂದ್ರದಲ್ಲಿ ವಾಸವಾಗಿದ್ದಾಳೆ. ಈ ಮಧ್ಯೆ, ಸುಮೈರಾಗೆ ಪಾಕಿಸ್ತಾನವು ತನ್ನ ದೇಶದ ಪೌರತ್ವ ನೀಡಿದೆ ಎಂದು ಪಾಕ್ನ ಪ್ರಮುಖ ಮಾಧ್ಯಮ 'ಡಾನ್' ವರದಿ ಮಾಡಿದೆ. ಪಾಕಿಸ್ತಾನದ ರಾಷ್ಟ್ರೀಯ ಡೇಟಾಬೇಸ್ ಮತ್ತು ನಿಯಂತ್ರಣ ಪ್ರಾಧಿಕಾರವು ಆಕೆಯ ಕುಟುಂಬದ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಬೆಂಗಳೂರಿನ ಬಂಧನ ಕೇಂದ್ರದಲ್ಲಿರುವ ಸುಮೈರಾಗೆ ಪಾಕಿಸ್ತಾನದ ಪೌರತ್ವ ಪ್ರಮಾಣಪತ್ರವನ್ನು ಸಚಿವಾಲಯ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 'ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಮಹಿಳೆಯ ಸೂಕ್ತ ಪ್ರಯಾಣದ ದಾಖಲೆಯನ್ನು ನೀಡಲಿದೆ. ಈ ಮೂಲಕ ಆಕೆ ತನ್ನ ಮಗಳೊಂದಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶ ನೀಡುತ್ತದೆ' ಎಂದು ಪಾಕ್ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ. ಬೆಂಗಳೂರಿನ ಜೈಲಿನಲ್ಲಿರುವ ಮಹಿಳೆಯ ಪ್ರಕರಣವನ್ನು ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್ (ಪಿಎಂಎಲ್ - ಎನ್) ನ ಸೆನೆಟರ್ ಇರ್ಫಾನ್ ಸಿದ್ದಿಕಿ ಅವರು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಬೆಂಗಳೂರಿನ ಜೈಲು ಅಧಿಕಾರಿಗಳು ತಮಗೆ ಈ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಸುಮೈರಾಗೆ ಪಾಕಿಸ್ತಾನದ ಪೌರತ್ವವನ್ನು ನೀಡುವ ಬಗ್ಗೆ ಭಾರತ ಸರ್ಕಾರ ಅಥವಾ ಪಾಕಿಸ್ತಾನ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ಶೀಘ್ರದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಮಾಹಿತಿ ಬರಬಹುದು ಎಂದು ತಿಳಿಸಿದ್ದಾರೆ. ನೆರವಾದ ವೈದ್ಯೆ ಜೈಲು ಸೇರಿದ್ದರು ಸುಮೈರಾ ಸೇರಿದಂತೆ ಇತರರಿಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ನೆರವಾಗಿದ್ದ ಸರಕಾರಿ ಆಸ್ಪತ್ರೆಯ ವೈದ್ಯೆ ಹಾಗೂ ಡಿ ಗ್ರೂಪ್ ನೌಕರನನ್ನು ಪೊಲೀಸರು ಬಂಧಿಸಿದ್ದರು.ಆಧಾರ್ ಕಾರ್ಡ್ ಪಡೆಯುವ ಸಂಬಂಧ ಡಿ ಗ್ರೂಪ್ ನೌಕರ ತಂದು ಕೊಟ್ಟ ದಾಖಲೆಗಳಿಗೆ ಪರಿಶೀಲನೆ ನಡೆಸದೆ ಸರಕಾರಿ ಆಸ್ಪತ್ರೆ ವೈದ್ಯೆ ಸಹಿ ಮಾಡಿದ್ದರು.
from India & World News in Kannada | VK Polls https://ift.tt/rEnySiJ