ಮೈಸೂರು ನಗರದಲ್ಲಿ ನೀರು ವಿತರಣಾ ತಾರತಮ್ಯ: ಕೆಲವೆಡೆ ದಿನವಿಡೀ, ಹಲವೆಡೆ 2 ದಿನಕ್ಕೊಮ್ಮೆ ಪೂರೈಕೆ..!

ಎಸ್‌. ಕೆ. ಚಂದ್ರಶೇಖರ್‌ : ನಗರಕ್ಕೆ ಅಗತ್ಯಕ್ಕಿಂತ 37 ಎಂಎಲ್‌ಡಿ (ಮಿಲಿಯನ್‌ ಲೀಟರ್‌ ಪರ್‌ ಡೇ) ಹೆಚ್ಚಿನ ದೊರೆಯುತ್ತಿದ್ದರೂ ಕೆಲವು ಬಡಾವಣೆಗಳಿಗೆ ಎರಡು - ಮೂರು ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ. ಪ್ರಸ್ತುತ ನಗರಕ್ಕೆ 278 ಎಂಎಲ್‌ಡಿ ಅಗತ್ಯವಿದ್ದು, ಕೃಷ್ಣರಾಜ ಸಾಗರ, ಕಬಿನಿ ಜಲಾಶಯದಿಂದ 315 ಎಂಎಲ್‌ಡಿ ಪೂರೈಕೆಯಾಗುತ್ತಿದ್ದರೂ ಯೋಜನಾ ಬದ್ಧವಾಗಿ ವಿತರಣೆಯಾಗದೆ ಸಮಸ್ಯೆಯಾಗಿದೆ. ಅದರಲ್ಲೂ ನರಸಿಂಹರಾಜ ಕ್ಷೇತ್ರದಲ್ಲಿ ನೀರಿನ ಬವಣೆ ಹೇಳತೀರದಾಗಿದ್ದು, ನಗರಾಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲೂ ಇದೇ ವಿಚಾರ ಪ್ರತಿಧ್ವನಿಸಿತ್ತು. ಪಕ್ಷಭೇದ ಮರೆತು ಶಾಸಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮೊದಲು ನಗರದೊಳಗಿನ ಬಡಾವಣೆಗಳಿಗೆ ಸಮರ್ಪಕ ನೀರು ಪೂರೈಸಿ ಎಂದು ಪಟ್ಟು ಹಿಡಿದಿದ್ದರು. 'ನಗರದಲ್ಲಿ ಸುಮಾರು 1.77 ಲಕ್ಷ ಅಧಿಕೃತ, 3.5 ಲಕ್ಷ ಅನಧಿಕೃತ ನೀರಿನ ಸಂಪರ್ಕ ಹೊಂದಿದ್ದು, ನಿತ್ಯ ಒಬ್ಬರಿಗೆ 60 ಲೀಟರ್‌ನಂತೆ 65 ವಾರ್ಡ್‌ನ ಅಷ್ಟೂ ಜನರಿಗೆ ಪೂರೈಸಿದರೂ ಇನ್ನೂ ಹತ್ತಾರು ಎಂಎಲ್‌ಡಿ ನೀರು ಉಳಿಯುತ್ತದೆ. ಆದರೆ, ಇದನ್ನು ಸಮರ್ಪಕವಾಗಿ ಪೂರೈಸಲಾಗದೆ ತೊಂದರೆಯಾಗುತ್ತಿದೆ' ಎಂಬುದು ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಅಭಿಪ್ರಾಯ. ಪ್ರಭಾವಿಗಳ ಬಡಾವಣೆಯಲ್ಲಿ ದಿನವಿಡೀ ನೀರು ಕೆಲವು ಪ್ರಭಾವಿಗಳು ವಾಸಿಸುತ್ತಿರುವ ಬಡಾವಣೆಗಳಲ್ಲಿ 24 ಗಂಟೆಯೂ ನೀರು ಬರುತ್ತಿರುತ್ತದೆ. ಇನ್ನು ಕೆಲವು ಕಡೆ ಎರಡು ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಇಂತಹ ನ್ಯೂನತೆ ಸರಿಪಡಿಸಬೇಕು, 65 ವಾರ್ಡ್‌ಗಳಲ್ಲೂ ಜನಸಂಖ್ಯೆ ಆಧಾರದ ಮೇಲೆ ಸಮರ್ಪಕವಾಗಿ ಹಂಚಿಕೆಯಾದರೆ ಯಾವ ಸಮಸ್ಯೆಯೂ ತಲೆದೋರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಅಧಿಕಾರಿ ನೇಮಿಸಿ: ನಗರದ ಎಲ್ಲಾ ಬಡಾವಣೆಗಳಿಗೆ ನೀರು ವಿತರಣೆಗಾಗಿಯೇ ಮಹಾನಗರ ಪಾಲಿಕೆಯಿಂದ ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಅವರು ಜನಸಂಖ್ಯೆ ಪ್ರಕಾರ ಎಷ್ಟು ಎಂಎಲ್‌ಡಿ ನೀರು ಬೇಕು ಎಂದು ನಿರ್ಧರಿಸಿ, ಯಾರ ಒತ್ತಡಕ್ಕೂ ಮಣಿಯದೆ ಹಂಚಿಕೆ ಮಾಡಿದರೆ ಮೈಸೂರಿನಲ್ಲಿ ನೀರಿನ ಬವಣೆಯೇ ಇರುವುದಿಲ್ಲ ಎಂಬುದು ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಸಲಹೆ. ಸೋರಿಕೆಗೂ ಕಡಿವಾಣ ಹಾಕಬೇಕು: ಎನ್‌. ಆರ್‌. ಕ್ಷೇತ್ರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಸಾಕಷ್ಟು ನೀರು ಸೋರಿಕೆಯಾಗುತ್ತಿದೆ. ಇದನ್ನು ಪತ್ತೆ ಹಚ್ಚಿ ತಡೆಗಟ್ಟದಿದ್ದರೆ 315 ಅಲ್ಲ 400 ಎಂಎಲ್‌ಡಿ ಪೂರೈಕೆಯಾದರೂ ಸಮಸ್ಯೆ ಬಗೆಹರಿಯುವುದಿಲ್ಲ. 'ನಗರಕ್ಕೆ ಅಗತ್ಯಕ್ಕಿಂತ 37 ಎಂಎಲ್‌ಡಿ ಹೆಚ್ಚಿನ ನೀರು ದೊರೆಯುತ್ತಿದ್ದರೂ ಬಡಾವಣೆಗಳಿಗೆ ಎರಡು - ಮೂರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಹಾಗಾದರೆ ನೀರು ಪೂರೈಸುವ ಸಾಮರ್ಥ್ಯ ಜಲಮಂಡಳಿಗೆ ಇಲ್ಲವೆ?' ಎಂದು ಈ ಹಿಂದೆ ನಗರಾಭಿವೃದ್ಧಿ ಸಚಿವರ ಸಭೆಯಲ್ಲಿ ತನ್ವೀರ್‌ಸೇಠ್‌ ಪ್ರಶ್ನಿಸಿದ್ದರು. ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಎಲ್. ನಾಗೇಂದ್ರ, 'ಕೆ. ಜಿ. ಕೊಪ್ಪಲು, ಹೆಬ್ಬಾಳು, ವಿಜಯನಗರ 2ನೇ ಹಂತ ಸೇರಿದಂತೆ ನಗರದೊಳಗಿನ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಯಾರದೋ ಒತ್ತಡಕ್ಕೆ ಮಣಿದು ಬೇರೆಡೆ ನೀರು ಕೊಟ್ಟು ತೊಂದರೆ ಮಾಡಬೇಡಿ' ಎಂದು ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/GROciop

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...