ಮೈಸೂರು: ಹಿಜಾಬ್ ಮಾತ್ರವಲ್ಲ ಕೇಸರಿ, ಹಸಿರು ಶಾಲು ಯಾವುದನ್ನು ಧರಿಸಿ ಬಂದರೂ ಅವರಿಗೆ ತರಗತಿಗೆ ಪ್ರವೇಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾಪುರದಲ್ಲಿ ಇಂದು ಹಿಜಾಬ್ ಧರಿಸಿ ಬಂದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ. ಆ ಕೊಠಡಿಯಲ್ಲಿ ಯಾವ ತರಗತಿಗಳು ನಡೆಯುತ್ತಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಿಲ್ಲುವುದು ಬೇಡವೆಂದು ಕೊಠಡಿಯಲ್ಲಿ ಕೂರಿಸಿದ್ದೇವೆ ಎಂದರು. ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಅವರು ನಮ್ಮ ಮಕ್ಕಳು. ಅವರು ತುಂಬಾ ಮುಗ್ಧತೆ ಇರುವ ಹೆಣ್ಣುಮಕ್ಕಳು. ಅವರ ಮುಗ್ಧತೆಯನ್ನ ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಗ್ಧ ವಿದ್ಯಾರ್ಥಿನಿಯರಿಗೆ ಶಾಲೆ ಒಳಗೆ ಕೊಠಡಿಯಲ್ಲಿ ಕೂರಿಸಿ ಬುದ್ಧಿ ಹೇಳುತ್ತೇವೆ ಎಂದು ಹೇಳಿದರು. ‘ಇದು ಧರ್ಮದ ಶಿಕ್ಷಣವಲ್ಲ. ಇದನ್ನ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಅರ್ಥ ಮಾಡಿಕೊಳ್ಳಬೇಕು. ನಾಳೆಯ ನ್ಯಾಯಾಲಯದ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದರ ಆಧಾರದ ಮೇಲೆ ಶಿಕ್ಷಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ. ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಶಾಲಾ ಆವರಣದ ಗೇಟ್‌ವರೆಗೂ ಹಿಜಾಬ್ ಧರಿಸಿ ಬನ್ನಿ, ನಮ್ಮ ತಕರಾರಿಲ್ಲ’ ಎಂದು ಸ್ಪಷ್ಟನೆ ನೀಡಿದರು. ನಿಮ್ಮ ಹಕ್ಕಿಗೆ ಹೋರಾಡಿ: ‘ನಿಮ್ಮ ಮಸೀದಿ ಒಳಗೆ ನಿಮಗೆ ಪ್ರವೇಶವಿಲ್ಲ. ಇದರ ವಿರುದ್ಧ ಹೋರಾಟ ಮಾಡಿ. ನಿಮ್ಮ ಹಕ್ಕುಗಳಿಗಾಗಿ ಅಲ್ಲಿ ಧ್ವನಿ ಎತ್ತಿ. ಶಿಕ್ಷಣ ವ್ಯವಸ್ಥೆ ಒಳಗಡೆ ಈ ಹೋರಾಟ ಮಾಡಬೇಡಿ. ಕೋಲಾರದಲ್ಲಿ ನಮಾಜ್ ಕೂಡ ಮಾಡಿದ್ದಾರೆ. ಇಂತಹದ್ದಕ್ಕೆಲ್ಲಾ ಅವಕಾಶ ಇಲ್ಲ’ ಎಂದು ಎಚ್ಚರಿಕೆ ನೀಡಿದರು.
from India & World News in Kannada | VK Polls https://ift.tt/dJ2LiC7