1008 ಕಿಮೀ ರಾಜ್ಯ ಹೆದ್ದಾರಿ ಮರುಡಾಂಬರೀಕರಣ: ಡಿಪಿಆರ್‌ ಸಲ್ಲಿಸಲು ಬೊಮ್ಮಾಯಿ ಸೂಚನೆ

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕೆಶಿಪ್‌, ಎಸ್‌ಎಚ್‌ಡಿಪಿ ಹಾಗೂ ಕೆಆರ್‌ಡಿಸಿಎಲ್‌ನಿಂದ ಅಭಿವೃದ್ಧಿಯಾಗಿ ತಾಳಿಕೆ-ಬಾಳಿಕೆ ಅವಧಿ ಮುಗಿದಿರುವ 1,008 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯ ಮರು ಡಾಂಬರೀಕರಣಕ್ಕೆ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು. ಗೃಹ ಕಚೇರಿ 'ಕೃಷ್ಣಾ'ದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ''ಅಗತ್ಯತೆ ಹಾಗೂ ಸಂಚಾರ ದಟ್ಟಣೆಯನ್ನು ಗಮನದಲ್ಲಿ ಇಟ್ಟುಕೊಂಡು ರಸ್ತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಅನುದಾನದ ಸದ್ಬಳಕೆಗೆ ಒತ್ತು ನೀಡಬೇಕು,'' ಎಂದು ಸೂಚಿಸಿದರು. ''ರಾಜ್ಯಾದ್ಯಂತ ನಾನಾ ಎಂಜಿನಿಯರಿಂಗ್‌ ಇಲಾಖೆಗಳಲ್ಲಿ ಏಕರೂಪ ದರಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯಡಿ ಜಾರಿಗೊಳಿಸಲಾಗುತ್ತಿದೆ. ಅದರಂತೆ ಸರಕಾರಿ ಕಟ್ಟಡಗಳಲ್ಲಿ ಬಳಕೆಯಾಗುವ ಸಾಮಗ್ರಿಗಳಿಗೆ ಏಕರೂಪ ದರಪಟ್ಟಿ ರೂಪಿಸಬೇಕು. ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಸೂಕ್ತ ರೀತಿಯಲ್ಲಿ ಸಂಯೋಜನೆಯಾಗಬೇಕು. ಇದಕ್ಕೆ ಪೂರಕವಾಗಿ ತಜ್ಞರಿಂದ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಬೇಕು,'' ಎಂದು ಅವರು ನಿರ್ದೇಶನ ನೀಡಿದರು. ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಇಲಾಖೆ ಒಡೆತನದಲ್ಲಿರುವ ಭೂಮಿಯಲ್ಲಿ ಕರ್ನಾಟಕ ವಸತಿ ಸಂಕೀರ್ಣಕ್ಕಾಗಿ 45 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದರು. ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ವರದಿ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನ ಸಂಬಂಧ ತ್ವರಿತವಾಗಿ ಮಧ್ಯಂತರ ವರದಿ ಸಲ್ಲಿಸಬೇಕು. ಸಂಸ್ಥೆಗಳ ಸಾಮರ್ಥ್ಯ ಗುರುತಿಸುವ ಜತೆಗೆ ಅವುಗಳ ಪರಿಣಾಮಕಾರಿ ಬಳಕೆಗಾಗಿ ಸೂಕ್ತ ಮಾರ್ಗೋಪಾಯಗಳ ಬಗ್ಗೆ ಶಿಫಾರಸು ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ರಾಜ್ಯದ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೊಡೀಕರಣ ಸಂಬಂಧ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚನೆಯಾಗಿರುವ ಸಮಿತಿ ಅಧ್ಯಕ್ಷ ಎಂ.ಆರ್‌. ಶ್ರೀನಿವಾಸಮೂರ್ತಿ ಅವರೊಂದಿಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ಸಭೆ ನಡೆಸಿ ಕೆಲ ಸೂಚನೆ ನೀಡಿದರು. ರಾಜ್ಯದ ಸಾರಿಗೆ ಸಂಸ್ಥೆಗಳ ಪುನಶ್ಚೇತನ ಸಂಬಂಧ ಸಿಎಂ ಬೊಮ್ಮಾಯಿ ತಮ್ಮ ಅಭಿಪ್ರಾಯ, ನಿರೀಕ್ಷೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಹಾಗೆಯೇ ಸಾರಿಗೆ ಸಂಸ್ಥೆಗಳ ಆಸ್ತಿಗಳಿಂದ ಆದಾಯ ಸೃಷ್ಟಿ, ಸಂಸ್ಥೆಯ ವರ್ಕ್‌ಶಾಪ್‌ಗಳ ಸದ್ಬಳಕೆ, ಮಾನವ ಸಂಪನ್ಮೂಲದ ಪರಿಣಾಮಕಾರಿ ಬಳಕೆ, ಸಂಸ್ಥೆಗಳ ಸೇವೆಯಲ್ಲಿ ಸುಧಾರಣೆ, ಹೊಸ ತಂತ್ರಜ್ಞಾನದ ಬಳಕೆ ಕುರಿತು ಚರ್ಚಿಸಿದರು. ಎಂ.ಆರ್‌.ಶ್ರೀನಿವಾಸ ಮೂರ್ತಿ ಅವರು ಈವರೆಗೆ ಸಮಿತಿ ನಡೆಸಿರುವ ಅಧ್ಯಯನ ಮತ್ತು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಿಎಂ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌, ಆರ್ಥಿಕ ಇಲಾಖೆ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಠಾರಿಯಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್‌ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.


from India & World News in Kannada | VK Polls https://ift.tt/VKAUZguYt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...