ಚಂಡೀಗಢ: ಪಂಚ ರಾಜ್ಯ ಚುನಾವಣೆಯ ಮಹತ್ವದ ರಣಕಣಗಳಲ್ಲಿ ಒಂದಾಗಿರುವ ಪಂಜಾಬಿನಲ್ಲಿ ಸಿಎಂ ಅಭ್ಯರ್ಥಿ ಘೋಷಣೆಯ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್ ಪಕ್ಷವು , ತನಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುತ್ತಿರುವ ಆಮ್ ಆದ್ಮಿ ಪಕ್ಷ (ಆಪ್)ವು ಅನುಸರಿಸಿದಂತೆ ಸಾರ್ವಜನಿಕರಿಂದ ಫೋನ್ ಮೂಲಕ ಸಿಎಂ ಅಭ್ಯರ್ಥಿ ಹೆಸರು ಸಂಗ್ರಹಿಸುವ ತಂತ್ರಕ್ಕೆ ಮೊರೆ ಹೋಗಿದೆ. ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಮೂಲಕ ಆಪ್ ಪಕ್ಷವು ಸಂಸದ ಭಗವಂತ್ ಮಾನ್ ಅವರನ್ನು ಪಂಜಾಬ್ ಜನರೇ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಘೋಷಿಸಿದೆ. ಇದೇ ರೀತಿ ಸಮೀಕ್ಷೆ ನಡೆಸುತ್ತಿರುವ ಕಾಂಗ್ರೆಸ್, ಜನರಿಗೆ ಮೊದಲ ಆಯ್ಕೆಯಾಗಿ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ಎರಡನೇ ಆಯ್ಕೆಯಾಗಿ ನವಜೋತ್ ಸಿಂಗ್ ಸಿಧು ಹಾಗೂ ಮೂರನೇ ಆಯ್ಕೆಯಾಗಿ ಸಂಘಟಿತ ಹೋರಾಟಕ್ಕೆ ಅಭಿಪ್ರಾಯ ನೀಡಲು ಕೋರಿದೆ. ಫೆ. 20ರಂದು ಪಂಜಾಬಿನಲ್ಲಿ ಮತದಾನವು ನಡೆಯುವ ಕಾರಣ, ಮುಂದಿನ ಕೆಲವೇ ವಾರಗಳ ಕಾಲ ಸಮೀಕ್ಷೆಯನ್ನು ಮುಂದುವರಿಸಿ ಸಿಎಂ ಅಭ್ಯರ್ಥಿ ಆಯ್ಕೆಯ ಪ್ರಹಸನ ನಡೆಸುವುದು ಹೈಕಮಾಂಡ್‌ನ ವಿಳಂಬ ತಂತ್ರವಾಗಿದೆ. ಯಾಕೆಂದರೆ, ಸಿಎಂ ಅಭ್ಯರ್ಥಿ ಘೋಷಣೆ ಮಾಡಿದಲ್ಲಿ ರಾಜ್ಯ ಕಾಂಗ್ರೆಸ್‌ನ ಒಳಬೇಗುದಿಯಿಂದ ಪಕ್ಷಕ್ಕೆ ಅಧಿಕಾರ ಕೈ ತಪ್ಪಲಿದೆ ಎಂಬ ಭಯ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಆವರಿಸಿದೆ. ಚನ್ನಿ ಪರ ಒಲವು: ವಿಧಾನಸಭೆ ಚುನಾವಣೆಗೆ ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಬುಧವಾರ ಬಿಡುಗಡೆ ಮಾಡಿದ್ದು, ಸಿಎಂ ಚನ್ನಿ ಅವರಿಗೆ ಮಣೆ ಹಾಕಲಾಗಿದೆ. ಆದರೆ, ಸಿಧು ಅವರ ಹೆಸರನ್ನು ಕೈಬಿಡಲಾಗಿದೆ. ಚನ್ನಿ ಜತೆಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ , ಗುಲಾಂ ನಬಿ ಆಜಾದ್, ಸಚಿನ್ ಪೈಲಟ್, ಭೂಪೇಶ್ ಬಘೇಲ್ ಕೂಡ ಸ್ಟಾರ್ ಕ್ಯಾಂಪೇನರ್‌ಗಳಾಗಿದ್ದಾರೆ. ಪಂಜಾಬಿನಲ್ಲಿ ಶೇ. 31ರಷ್ಟು ಮಂದಿ ಪರಿಶಿಷ್ಟ ಸಮುದಾಯದವರು ಇದ್ದಾರೆ. ಹಾಗಾಗಿ ಸಿಎಂ ಚನ್ನಿ ಅವರ ಪರವಾಗಿ ನಿಂತಿರುವ ಹೈಕಮಾಂಡ್, ಭದೌರ್ ಮತ್ತು ಛಮ್‌ಕೌರ್ ಸಾಹಿಬ್ ಎರಡೂ ಕ್ಷೇತ್ರಗಳಲ್ಲಿ ಚನ್ನಿ ಅವರನ್ನು ಕಣಕ್ಕಿಳಿಸಿದೆ. ಹಾಲಿ ಸಿಎಂ ಸೋಲು ಕಾಣದಂತೆ ಎಚ್ಚರಿಕೆ ವಹಿಸಿದೆ.
from India & World News in Kannada | VK Polls https://ift.tt/eWYMzmv1P