ಬಿಎಂಟಿಸಿ ಬಸ್‌ಗಳ ಕೊರತೆ, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪರದಾಟ

ಬೆಂಗಳೂರು: ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಬಸ್‌ ಸಂಚಾರ ಆರಂಭಗೊಂಡಿದ್ದರೂ ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಪರದಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಮಂಗಳವಾರ ಮೆಜೆಸ್ಟಿಕ್ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಜಮಾಯಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಪ್ರಯಾಣಿಕರು ಬಸ್‌ಗಳಿಗೆ ಕಾದು ಕುಳಿತರೂ ಬಸ್‌ ಸಿಗಲಿಲ್ಲ. ಇದರಿಂದ ಪ್ರಯಾಣಿಕರು ಅಗತ್ಯ ಸ್ಥಳಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದೆ ಪರದಾಡಬೇಕಾಯಿತು. ಬೆಳಗ್ಗೆ 7 ಗಂಟೆಯಿಂದ ಬಸ್‌ ಸಂಚಾರ ಆರಂಭಗೊಂಡರೂ ಬಹಳಷ್ಟು ರೂಟ್‌ಗಳಿಗೆ ಬಸ್‌ ಸಂಚಾರ ಇರಲಿಲ್ಲ. ನಗರದಲ್ಲಿ ಕೇವಲ ಶೇ. 50 ರಷ್ಟು ಬಸ್ ಗಳ ಸಂಚಾರಕ್ಕೆ ಬಿಎಂಟಿಸಿ ಅವಕಾಶ ಕಲ್ಪಿಸಿದೆ. ಲಾಕ್‌ಡೌನ್ ಜಾರಿಯಲ್ಲಿರುದರಿಂದ ಪೂರ್ಣ ಪ್ರಮಾಣದ ಕಾರ್ಯಾಚರಣೆ ಇನ್ನು ಆರಂಭಗೊಂಡಿಲ್ಲ. ಹೀಗಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ಬಸ್‌ಗಳ ಕೊರತೆ ಎದುರಾಗಿದೆ. ಬಿಎಂಟಿಸಿ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಪಾಸ್‌ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಿಲಾಗಿತ್ತು. ಆದರೆ ಇದೀಗ ಟಿಕೆಟ್ ಪಡೆದುಕೊಂಡು ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಹೀಗಿದ್ದರೂ ಬಸ್‌ಗಳ ಕೊರತೆ ಇದೆ. ಇದರಿಂದ ಸರಿಯಾದ ಸಮಯಕ್ಕೆ ಕಚೇರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಬಸ್‌ ಸಂಚಾರ ಆರಂಭಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಸದ್ಯ ಪ್ರತಿದಿನ 3,500 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ದಿನ 7 ಗಂಟೆಯಿಂದ ಕಾರ್ಯಾಚರಣೆ ಆರಂಭಗೊಳ್ಳುತ್ತದೆ. ಪೂರ್ಣ ಪ್ರಮಾಣದ ಬಸ್‌ ಸಂಚಾರ ಇನ್ನೂ ಆರಂಭವಾಗಿರದ ಕಾರಣದಿಂದ ಸಮಸ್ಯೆ ಎದುರಾಗಿದೆ. ಲಾಕ್‌ಡೌನ್ ಸಂಪೂರ್ಣ ತೆರವಾದ ಬಳಿಕ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಗಳು.


from India & World News in Kannada | VK Polls https://ift.tt/2X4QzEp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...