ಭಾರತ-ಚೀನಾ ಟೆನ್ಶನ್‌: ಉಭಯ ಸೇನಾ ನಿಯೋಜನೆ ಹೆಚ್ಚಳ, ಪ್ರಧಾನಿ-ಸೇನಾ ಮುಖ್ಯಸ್ಥರ ತುರ್ತು ಸಭೆ

ಹೊಸದಿಲ್ಲಿ: ವಿಶ್ವಾದ್ಯಂತ ಕೊರೊನಾ ಮರಣಮೃದಂಗದ ನಡುವೆಯೇ ಭಾರತ-ಚೀನಾ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಉಭಯ ದೇಶಗಳೂ ಲಡಾಖ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೇನೆ ನಿಯೋಜನೆ ಹೆಚ್ಚಿಸುವುದರೊಂದಿಗೆ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ. ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಸೇನಾ ಮುಖಂಡರೊಂದಿಗೆ ಪ್ರತ್ಯೇಕ ತುರ್ತು ಸಭೆಗಳನ್ನು ನಡೆಸಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.ಇತ್ತೀಚೆಗೆ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಎರಡು ಬಾರಿ ಮಾರಾಮಾರಿ ನಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು 2017ರ ಡೋಕ್ಲಾಮ್‌ ತಿಕ್ಕಾಟಕ್ಕಿಂತ ದೊಡ್ಡದಾಗುವ ಮತ್ತು ದೀರ್ಘಕಾಲ ಮುಂದುವರಿಯುವ ಮುನ್ಸೂಚನೆಯೂ ಕಂಡು ಬಂದಿದೆ.ಕೊರೊನಾ ವೈರಸ್‌ ವಿಚಾರವಾಗಿ ಅಮೆರಿಕ ಸೇರಿದಂತೆ ವಿಶ್ವ ಸಮುದಾಯವನ್ನು ಎದುರು ಹಾಕಿಕೊಂಡಿರುವ ಚೀನಾ, ಶೀತಲ ಸಮರದ ಎಚ್ಚರಿಕೆ ನೀಡಿದೆ. ಇದೇ ವಿಚಾರವಾಗಿ ಚೀನಾವನ್ನು ದೂರಿದ ಭಾರತದ ವಿರುದ್ಧವೂ ಅಸಮಾಧಾನಗೊಂಡಿರುವ ಡ್ರ್ಯಾಗನ್‌ ರಾಷ್ಟ್ರ ಲಡಾಖ್‌ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಅಪ್ರಚೋದಿತವಾಗಿ ಕೆಣಕಿ ತಗಾದೆ ತೆಗೆದಿದೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ಬಳಿಕ ಈ ಭಾಗದ ಗಡಿಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಭಾರತ ವೇಗ ನೀಡಿರುವುದು ಚೀನಾದ ಅಸಮಾಧಾನಕ್ಕೆ ಮತ್ತೊಂದು ಮುಖ್ಯ ಕಾರಣ. ಚೀನಾದ ನಡೆಗೆ ಭಾರತ ಖಡಕ್‌ ಪ್ರತ್ಯುತ್ತ ನೀಡಿದೆ. ಗಡಿಯಲ್ಲಿ ಸಶಸ್ತ್ರ ಪಡೆಗಳಿಗೆ ಸನ್ನದ್ಧತೆಯ ಸಂದೇಶ ರವಾನಿಸಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲವೆಂದು ಭಾರತ ಸ್ಪಷ್ಟಪಡಿಸಿದೆ. ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನೆ ಸದ್ಯಕ್ಕೆ ವಾಪಸ್‌ ಕರೆಸುವುದಿಲ್ಲ ಎಂದಿದೆ.ಕೊರೊನಾ ನೆಪ ಹೇಳಿ ಪ್ರಜೆಗಳನ್ನು ಭಾರತದಿಂದ ವಾಪಸ್ ಕರೆಯಿಸಿಕೊಳ್ಳುತ್ತಿರುವ ಚೀನಾ

ಲಡಾಖ್‌ ಪೂರ್ವ ಭಾಗದ ಗಡಿ ನಿಯಂತ್ರಣ ರೇಖೆಯ ಪಾಂಗೊಂಗ್‌ ತ್ಸೋ ಮತ್ತು ಗಾಲ್ವಾನ್‌ ಕಣಿವೆ ಸದ್ಯ ಉಭಯ ದೇಶಗಳ ಸೇನಾ ಸಂಘರ್ಷಕ್ಕೆ ಕೇಂದ್ರ ಬಿಂದು ಎನಿಸಿದೆ. ಈ ವಲಯದ ಗಡಿ ರೇಖೆಯ ಉಭಯ ಕಡೆಗಳಲ್ಲಿ ಎರಡೂ ದೇಶಗಳು ಪೈಪೋಟಿಯ ಮೇಲೆ ಸೇನೆ ಜಮಾವಣೆ ಮಾಡತೊಡಗಿವೆ. ಚೀನಾ ಈಗಾಗಲೇ 2,500ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದ್ದು, ಕ್ರಮೇಣ ಸಂಖ್ಯೆ ಹೆಚ್ಚಿಸುತ್ತಿದೆ. ಅಲ್ಲದೆ, ಈ ಪ್ರದೇಶದಲ್ಲಿ ತಾತ್ಕಾಲಿಕ ಮೂಲಸೌಕರ್ಯ ನಿರ್ಮಾಣಕ್ಕೆ ಮುಂದಾಗಿರುವ ಚೀನಾ ಭಾರೀ ಯಂತ್ರೋಪಕರಣಗಳನ್ನು ತಂದು ನಿಲ್ಲಿಸಿದೆ. ಈ ಪ್ರದೇಶದಲ್ಲಿ ಭಾರತ ನಿಯೋಜಿಸಿರುವ ಯೋಧರ ಸಂಖ್ಯೆ ಚೀನಾಕ್ಕಿಂತಲೂ ಹೆಚ್ಚಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಮೂರೂ ಸೇನಾಪಡೆಗಳ ಮುಖ್ಯಸ್ಥರು, ಎನ್‌ಎಸ್‌ಎ ಅಜಿತ್‌ ಧೋವಲ್‌, ಸಶಸ್ತ್ರ ಪಡೆಗಳ ಜಂಟಿ ಮುಖ್ಯಸ್ಥ ಬಿಪಿನ್‌ ರಾವತ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ಜತೆ ಸಭೆಗೂ ಮುನ್ನ ಮೂರೂ ಪಡೆಗಳ ಮುಖ್ಯಸ್ಥರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಈ ಮಧ್ಯೆ ಬುಧವಾರ ದಿಲ್ಲಿಯಲ್ಲಿ ಆರ್ಮಿ ಕಮಾಂಡರ್‌ಗಳ ದ್ವೈವಾರ್ಷಿಕ ಸಮಾವೇಶ ನಡೆಯಲಿದ್ದು, ಅಲ್ಲೂ ಚೀನಾ ಬಿಕ್ಕಟ್ಟು ಚರ್ಚೆಗೆ ಬರಲಿದೆ.

ನಮ್ಮ ಇತಿಹಾಸವನ್ನು ಭಾರತೀಯ ಸೇನಾಧ್ಯಕ್ಷ ಅಪಹಾಸ್ಯ ಮಾಡಿದ್ದಾರೆ: ನೇಪಾಳ ರಕ್ಷಣಾ ಸಚಿವ!

ಲಡಾಖ್‌ ಬಳಿ ಚೀನಾ ತನ್ನ ವಾಯುನೆಲೆ ವಿಸ್ತರಿಸಿದ್ದು, ಕಳೆದ ಹಲವು ತಿಂಗಳಲ್ಲಿ ಭಾರಿ ನಿರ್ಮಾಣ ಕಾರ್ಯ ನಡೆದಿದೆ. ಈ ವಾಯುನೆಲೆಯು ಯೋಧರ ನಡುವೆ ಮಾರಾಮಾರಿ ನಡೆದ ಪ್ರದೇಶದಿಂದ 200 ಕಿ.ಮೀ ದೂರದಲ್ಲಿದೆ. 4 ಫೈಟರ್‌ಜೆಟ್‌ಗಳು, ಯುದ್ಧ ಹೆಲಿಕಾಪ್ಟರ್‌ಗಳನ್ನು ಚೀನಾ ಇಲ್ಲಿ ತಂದು ನಿಲ್ಲಿಸಿರುವುದು ಉಪಗ್ರಹ ಆಧರಿತ ಚಿತ್ರಗಳಿಂದ ದೃಢಪಟ್ಟಿದೆ.

ಮೇ 5,6 ರಂದು ಲಡಾಖ್‌ನಲ್ಲಿ ಉಭಯ ಯೋಧರ ಮಾರಾಮಾರಿ

ಜಟಾಪಟಿ ವೇಳೆ ಎರಡೂ ಕಡೆಯ 100ಕ್ಕೂ ಹೆಚ್ಚು ಯೋಧರಿಗೆ ಗಾಯ

ಸಂಘರ್ಷದ ನಂತರ ಹಲವು ಬಾರಿ ನಡೆದ ಸಂಧಾನ ಯತ್ನ ವಿಫಲ

ಮೇ 9ರಂದು ಸಿಕ್ಕಿಂ ವಲಯದಲ್ಲೂ ಉಭಯ ಪಡೆಗಳ ಸಂಘರ್ಷ



from India & World News in Kannada | VK Polls https://ift.tt/3d5EfJx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...