ಬೆಂಗಳೂರು: ಮಾಗಡಿಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕನಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಆ ಬಸ್‌ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ಆರೋಗ್ಯ ಸಚಿವ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತಾಗಿ ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜೊತೆಗೆ ಪ್ರಯಾಣಿಸಿದವರನ್ನು ತಪಾಸಣೆಗೆ ಒಳಪಡಿಸಲು ಸೂಚನೆ ನೀಡಿದ್ದೇನೆ. ಅಲ್ಲದೆ ಅವರ ಜೊತೆಗೆ ಸಂಪರ್ಕದಲ್ಲಿದ್ದ ಕೆಎಸ್‌ಆರ್‌ಸಿಟಿ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದರು. ಲಾಕ್‌ಡೌನ್ ಸಡಿಲಗೊಂಡ ಕಾರಣದಿಂದಾಗಿ ಸಾರಿಗೆ ಸಂಚಾರ ಆರಂಭಗೊಂಡಿದ್ದು, ಕೆಂಪು ವಲಯ ಹಾಗೂ ಕಂಟೈನ್‌ಮೆಂಟ್ ವಲಯದಿಂದ ಕೆಲಸಕ್ಕೆ ಹಾಜರಾಗಿರುವ ಸಿಬ್ಬಂದಿ ಹಾಗೂ ಅವರ ಜೊತೆಗೆ ಅವರ ಸಂಪರ್ಕದಲ್ಲಿ ಇರುವವರಿಗೂ ತಪಾಸಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ರಾಜ್ಯಾದ್ಯಂತ ಕೊರೊನಾ ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತಪಾಸಣೆಯನ್ನು ನಡೆಸಲು ಆರೋಗ್ಯ ಇಲಾಖೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಈ ಪ್ರಕರಣದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದರು. ಇದೇ ವೇಳೆ ರಾಜ್ಯದಲ್ಲಿ ಆಯುಷ್ ವೈದ್ಯರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಆಯುಷ್ ವೈದ್ಯರು ಸಮಸ್ಯೆಗಳ ಸಂಬಂಧಪಟ್ಟಂತೆ ಈಗ ಸಭೆ ನಡೆಸುತ್ತೇನೆ. ಆಯುಷ್ ವೈದ್ಯರು ನನ್ನ ಮುಂದೆ ಹಲವು ಬೇಡಿಕೆಗಳನ್ನ ಇಟ್ಟಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆಗಳು ಹಾಗೇ ಇವೆ.ಎಂಬಿಬಿಎಸ್ ವೈದ್ಯರ ಸಮನಾಗಿ ಆಯುಷ್ ವೈದ್ಯರು ವೇತನ ಕೇಳಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಒಂದು ಸಮಿತಿಯನ್ನು ರಚಿಸುತ್ತೇವೆ. ಆ ಸಮಿತಿ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ಕೊಡಿ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಹೇಳಿದಂತೆ ಆಯುಷ್ ಚಿಕಿತ್ಸೆಗೆ ನಾವು ಹೆಚ್ಚು ಆದ್ಯತೆ ಕೊಡುತ್ತೇವೆ ಎಂದಿದ್ದಾರೆ.
from India & World News in Kannada | VK Polls https://ift.tt/2ZEXC8i