ಲಕ್ನೋ: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಬೆಲ್ಘಾಟ್ ಪ್ರದೇಶದಲ್ಲಿ ಮಾವಿನ ತೋಟವೊಂದರಲ್ಲಿ 300ಕ್ಕೂ ಹೆಚ್ಚು ಬಾವಲಿಗಳು ಸತ್ತು ಬಿದ್ದಿರುವುದು ಪರಿಸರ ನಿವಾಸಗಳಲ್ಲಿ ಭಾರಿ ಆತಂಕವನ್ನು ಮನೆ ಮಾಡಿದೆ. ಇಡೀ ದೇಶವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಇಂತಹದೊಂದು ಘಟನೆ ವರದಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಬಾವಲಿಗಳ ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಬಾವಲಿಗಳ ಶವ ಪರೀಕ್ಷೆಯ ಬಳಿಕ ಕಾರಣ ತಿಳಿದು ಬರುವ ಸಾಧ್ಯತೆಯಿದೆ. ಉಷ್ಣಾಂಶ ಹಾಗೂ ನೀರಿನ ಕೊರತೆಯಿಂದಾಗಿ ಸಾವು ಸಂಭವಿಸಿರುವುದಾಗಿ ಪರಿಸರ ವಾಸಿಗಳು ಅಂದಾಜಿಸಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ತಪ್ಪು ಮಾಹಿತಿ ಹರಡುತ್ತಿರುವುದು ಆಂತಕಕ್ಕೆ ಕಾರಣವಾಗಿದೆ. ಧ್ರುವ ನಾರಾಯಣ್ ಸಿಂಗ್ ಒಡೆತನದಲ್ಲಿರುವ ಮಾವಿನ ತೋಟದಲ್ಲಿ 300ಕ್ಕೂ ಹೆಚ್ಚು ಬಾವಲಿಗಳು ಸತ್ತು ಬಿದ್ದಿದ್ದವು. ಬರೈಲಿಯಲ್ಲಿರುವ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (ಐವಿಆರ್‌ಐ) ಬಾವಲಿಗಳ ಶವ ಪರೀಕ್ಷೆಯನ್ನು ನಡೆಸಲಾಗುವುದು. ಇದರಿಂದ ಉಷ್ಣಾಂಶ ಅಥವಾ ಕೀಟನಾಶಕಗಳ ಸೇವನೆಯಿಂದ ಸಾವನ್ನಪ್ಪಿದೆಯೇ ಎಂಬುದು ತಿಳಿದು ಬರಲಿದೆ. ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿಎಚ್ ಪಾಠಕ್ ಹೇಳಿಕೆ ಪ್ರಕಾರ ಫಂಗಸ್‌ನಿಂದ ಉಂಟಾಗುವ ವೈಟ್-ನಾಸ್ ಸಿಂಡ್ರೋಮ್ ಎಂಬ ರೋಗದಿಂದಾಗಿ ಬಾವಲಿಗಳ ಸಾಮೂಹಿತ ಸಾವಿಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಇಂತಹ ರೋಗಗಳು ವಿದೇಶದಲ್ಲೂ ವರದಿಯಾಗಿದೆ. ಇದು ಅಮೆರಿಕದಲ್ಲೂ ಅಪಾಯಕಾರಿಯಾಗಿ ಹರಡಿತ್ತು ಎಂದು ವಿವರಣೆ ನೀಡಿದ್ದಾರೆ. ಆದರೆ ಹಿಂದೆಂದು ಬಾವಲಿಗಳು ಈ ರೀತಿಯಾಗಿ ಸಾಯುವುದನ್ನು ನೋಡಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/2ZEK8cP