ವಾರಂಗಲ್: ತೆಲಂಗಾಣದ ವಾರಂಗಲ್‌ನ ಗ್ರಾಮವೊಂದರ ಬಾವಿಯಲ್ಲಿ ಪತ್ತೆಯಾದ 9 ಮೃತದೇಹಗಳ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರೇಯಸಿಯ ಕೊಲೆ ಮುಚ್ಚಿ ಹಾಕಲು ಯುವಕ ನಡೆಸಿರುವ ಸಾಮೂಹಿಕ ಹತ್ಯಾಕಾಂಡ ಇದು ಎಂಬ ವಿಷಯವನ್ನು ತನಿಖೆಯಿಂದ ಬಯಲಾಗಿದೆ. ಈ ಸಂಬಂಧ ಬಿಹಾರದ ವಲಸೆ ಕಾರ್ಮಿಕ ಸಂಜಯ್ ಕುಮಾರ್ ಯಾದವ್‌ನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ತೆಲಂಗಾಣದ ಜಿಲ್ಲೆಯ ಗೀಸುಗೊಂಡ ಗ್ರಾಮದ ಒಂದೇ ಬಾವಿಯಲ್ಲಿ ಮೇ 22ರಂದು ಒಂಬತ್ತು ಶವಗಳು ಪತ್ತೆಯಾಗಿದ್ದವು. ಹೈದರಾಬಾದ್‌ನಿಂದ 150 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ನಡೆದ ಈ ಪ್ರಕರಣ , ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದು ಸಾಮೂಹಿಕ ಆತ್ಮಹತ್ಯೆ ಇರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಕೊಲೆಯಾದವರೆಲ್ಲರೂ ವಲಸೆ ಕಾರ್ಮಿಕರು. ಇವರಲ್ಲಿ ಮೂವರು ಮಕ್ಕಳೂ ಇದ್ದಾರೆ. ಹತ್ಯೆಯಾದವರಲ್ಲಿ ಆರು ಮಂದಿ ಪಶ್ಚಿಮ ಬಂಗಾಳದವರು, ಇಬ್ಬರು ಬಿಹಾರದವರು ಮತ್ತು ಒಬ್ಬರು ಈಶಾನ್ಯರಾಜ್ಯದ ತ್ರಿಪುರಾದವರು. ಪ್ರೇಯಸಿಯ ಕೊಲೆಯಿಂದ ಶುರು: ಮೂರು ಮಕ್ಕಳ ತಾಯಿಯಾದ ರಫೀಖಾ ಎಂಬಾಕೆ ಜತೆ ಅಪರಾಧಿ ಯಾದವ್ ಸಂಬಂಧ ಹೊಂದಿದ್ದ. ಈಕೆ ಕಳೆದ ಮಾರ್ಚ್‌ನಿಂದಲೇ ಕಾಣೆಯಾಗಿದ್ದಳು. ವಾಸ್ತವಾಗಿ ಯಾದವ್ ಈಕೆಯನ್ನು ಕೊಲೆ ಮಾಡಿದ್ದ. ಅದನ್ನು ಮುಚ್ಚಿ ಹಾಕಲು ನಿರ್ದಯವಾಗಿ 9 ಜನರನ್ನು ಹತ್ಯೆಗೈದಿದ್ದಾನೆ. ರಫೀಖಾಳ 15 ವರ್ಷದ ಮಗಳ ಮೇಲೂ ಯಾದವ್‌ನ ವಕ್ರದೃಷ್ಟಿ ಬಿದ್ದಿತ್ತು. ಈ ಬಗ್ಗೆ ರಫೀಖಾ ಸಂಜಯ್‌ಗೆ ಎಚ್ಚರಿಕೆ ನೀಡಿ ಪೊಲೀಸರಿಗೆ ತಿಳಿಸುವುದಾಗಿ ಹೆದರಿಸಿದ್ದಳು. ಇದರಿಂದ ಕ್ರೋಧಗೊಂಡ ಸಂಜಯ್ ಮಹಿಳೆಯನ್ನು ಕೊಲ್ಲಲು ನಿರ್ಧರಿಸಿದ. ಸಂಚಿನ ಭಾಗವಾಗಿ ರಫೀಖಾಳನ್ನು ಮದುವೆಯಾಗುವುದಾಗಿ ಮತ್ತು ಆಕೆಯ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಪುಸಲಾಯಿಸಿದ್ದ. ಇದನ್ನು ನಂಬಿ ರಫೀಖಾ ಆತನೊಂದಿಗೆ ಮಾರ್ಚ್ 6ರಂದು ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಳು. ಪ್ರಯಾಣದ ವೇಳೆ ಊಟದಲ್ಲಿ ನಿದ್ರೆ ಮಾತ್ರೆ ಬೆರಸಿ ರಫೀಖಾಳಿಗೆ ನೀಡಿದ್ದ. ಊಟ ಸೇವಿಸಿದ ಬಳಿಕ ಮಹಿಳೆ ನಿದ್ರೆಗೆ ಜಾರಿದಳು. ನಂತರ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಚಲಿಸುವ ರೈಲಿ ನಿಂದಲೇ ಶವವನ್ನು ಹೊರಕ್ಕೆ ಎಸೆದಿದ್ದ! ಊರಿಗೆ ಮರಳಿ ಹತ್ಯಾಕಾಂಡ: ನಂತರ ಗ್ರಾಮಕ್ಕೆ ಒಬ್ಬನೇ ಹಿಂದಿರುಗಿದ ಸಂಜಯ್‌ನನ್ನು ರಫೀಖಾಳ ಸಂಬಂಧಿ ನಿಶಾ ಪ್ರಶ್ನಿಸಿದ್ದಳು. ಆತನ ಬಗ್ಗೆ ಅನುಮಾನಗೊಂಡು, ದೂರು ನೀಡುವಾಗಿ ಬೆದರಿಸಿದ್ದಳು. ಇದರಿಂದ ಕೊಲೆ ವಿಷಯ ಬಯಲಾಗುವುದೆಂದು ಆತಂಕಗೊಂಡಿದ್ದ ಸಂಜಯ್, ನಿಶಾಳನ್ನೂ ರಫೀಖಾ ಮಾದರಿಯಲ್ಲೇ ನಿದ್ರೆ ಮಾತ್ರೆಕೊಟ್ಟು ಕೊಲ್ಲಲು ನಿರ್ಧರಿಸಿದ್ದ. ಇದೇ ಉದ್ದೇಶಕ್ಕಾಗಿ ಮೇ 16ರಿಂದ ಮೇ 20ರವರೆಗೆ ನಿಶಾ ಮನೆಗೆ ಅಗಾಗ ಭೇಟಿ ನೀಡಿ ಹತ್ಯೆಗೆ ಪ್ರಯತ್ನಿಸಿದ್ದ. ನಿಶಾ ತನ್ನ ಪತಿ ಮಕ್ಸೂದ್‌ಗೂ ಈ ವಿಷಯ ತಿಳಿಸಿರಬಹುದೆಂದು ಅನುಮಾನ ಮೂಡಿ ಆಕೆಯ ಕುಟುಂಬವನ್ನೂ ಮುಗಿಸಲು ಸಂಚು ರೂಪಿಸಿದ್ದ. ಇದಕ್ಕಾಗಿ ಸಾಕಷ್ಟು ನಿದ್ರೆ ಮಾತ್ರೆಗಳನ್ನು ಖರೀದಿಸಿದ್ದ. ಈ ನಡುವೆ ಮೇ 20ರಂದು ಮಕ್ಸೂದ್ ಪುತ್ರನ ಹುಟ್ಟಹಬ್ಬದ ಸಮಾರಂಭ ಏರ್ಪಡಿಸಲಾಗಿತ್ತು. ಅಂದು ಯಾರಿಗೂ ಗೊತ್ತಾಗದಂತೆ ಸಂಜಯ್ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿದ್ದ. ಆಹಾರ ಸೇವಿಸಿದ್ದ ಮಕ್ಸೂದ್, ಪತ್ನಿ ನಿಶಾ, ಮೂವರು ಮಕ್ಕಳು, ಸ್ನೇಹಿತ ಶಕೀಲ್ ಪ್ರಜ್ಞಾಹೀನರಾದರು. ಇವರೆಲ್ಲರನ್ನೂ ಬಾವಿಗೆ ತಳ್ಳಲು ನಿರ್ಧರಿಸಿದ್ದ. ಆದರೆ, ಕಟ್ಟಡ ಸಮೀಪ ತನ್ನ ಮೂವರು ಸಹೋದ್ಯೋಗಿಗಳಿಗೆ ಇದು ಗೊತ್ತಾಗುತ್ತದೆ ಎಂದು ಅವರನ್ನೂ ಸಹ ಪುಸಲಾಯಿಸಿ ನಿದ್ರೆ ಮಾತ್ರೆಗಳನ್ನು ನೀಡಿ ಪ್ರಜ್ಞೆ ತಪ್ಪಿಸಿದ್ದ. ಬಳಿಕ ಮಧ್ಯರಾತ್ರಿ ಎಲ್ಲರನ್ನು ಗೋಣಿಚೀಲಗಳಲ್ಲಿ ಹಾಕಿ, ಎಳೆದು ತಂದು ಒಬ್ಬರಾದ ಮೇಲೆ ಒಬ್ಬರಂತೆ 9 ಜನರನ್ನೂ ಬಾವಿಗೆ ತಳ್ಳಿದ್ದ.
from India & World News in Kannada | VK Polls https://ift.tt/2LXD0QC