- ವೆಂ. ಸುನೀಲ್ ಕುಮಾರ್, ಕೋಲಾರ ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಬಹುನಿರೀಕ್ಷಿತ ಬಿತ್ತನೆ ಬೀಜಗಳ ಕರಡು ವಿಧೇಯಕ ಹಲವು ಲೋಪಗಳನ್ನು ಹೊಂದಿದ್ದು, ಈಗಾಗಲೇ ತೀವ್ರ ಸಂಕಷ್ಟ ಎದುರಿಸುತ್ತಿರುವ ಕೃಷಿಕರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡುವ ಆತಂಕ ಮೂಡಿಸಿದೆ. ಬಿತ್ತನೆ ಬೀಜಗಳಲ್ಲಿನ ವೈವಿಧ್ಯತೆಗೆ ಧಕ್ಕೆಯುಂಟು ಮಾಡುವ ಜತೆಗೆ ಕಂಪನಿಗಳ ಏಕಸ್ವಾಮ್ಯಕ್ಕೆ ಇದು ರಹದಾರಿ ಮಾಡಿಕೊಡಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳ ಪೂರೈಕೆ, ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕರಡು ವಿಧೇಯಕ ಸಿದ್ಧಪಡಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸಲು ಕೇಂದ್ರ ಸಿದ್ಧತೆ ನಡೆಸಿತ್ತಾದರೂ, ಈ ಬಗ್ಗೆ ವಿರೋಧದ ದನಿ ಕೇಳಿಬಂದ ಹಿನ್ನೆಲೆಯಲ್ಲಿ ಮುಂದೂಡಿತು. ಫೆಬ್ರವರಿಯಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಇದು ಮಂಡನೆಯಾಗುವ ಸಾಧ್ಯತೆ ಇರುವುದರಿಂದ, ಅದಕ್ಕೂ ಮುನ್ನ ಹಲವು ಅಂಶಗಳಿಗೆ ಬದಲಾವಣೆ ತರಬೇಕೆಂಬ ಒತ್ತಾಯ ಕೃಷಿಕ ವರ್ಗದಿಂದ ಕೇಳಿಬರುತ್ತಿದೆ. ವಿಧೇಯಕ ಕಾಯಿದೆಯ ರೂಪ ಪಡೆದರೆ ಬಿತ್ತನೆ ಬೀಜಕ್ಕೆ ಸಂಬಂಧಿಸಿ ರೈತರ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ. ರೈತರು ಬಿತ್ತನೆ ಬೀಜಗಳಿಗಾಗಿ ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಕಂಪನಿಗಳು ಸಂಪೂರ್ಣವಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲಿವೆ ಎಂಬುದು ರೈತ ಸಂಘಟನೆಗಳ ಪ್ರಮುಖ ಆತಂಕ. ಇತ್ತೀಚೆಗಷ್ಟೇ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಒಪ್ಪಂದಕ್ಕೆ ಸಂಬಂಧಿಸಿ ದೇಶಾದ್ಯಂತ ತೀವ್ರ ವಿರೋಧ ಎದುರಾದ ಅವಧಿಯಲ್ಲೇ ಜನರ ಆತಂಕಕ್ಕೆ ಮನ್ನಣೆ ನೀಡಿ ಕೇಂದ್ರ ಸರಕಾರ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಇದೀಗ ಬೀಜ ವಿಧೇಯಕಕ್ಕೆ ಸಂಬಂಧಿಸಿದ ಲೋಪಗಳ ಆತಂಕವನ್ನೂ ಕೇಂದ್ರಕ್ಕೆ ತಲುಪಿಸಲು ಹಲವು ರೈತ ಸಂಘಟನೆಗಳು ಹಾಗೂ ಭಾರತೀಯ ಬೀಜ ಒಕ್ಕೂಟ (ಎನ್ಎಸ್ಎಐ) ಪ್ರಯತ್ನಿಸುತ್ತಿವೆ. ರೈತ ಸಂಘಟನೆಗಳ ಆಕ್ಷೇಪಗಳೇನು?
- ರೈತರ ಸ್ವಂತ ಬ್ರಾಂಡ್ನ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ
- ಬಹುರಾಷ್ಟ್ರೀಯ ಕಂಪನಿಗಳ ಏಕಸ್ವಾಮ್ಯತೆ, ದೇಶದ ಬೀಜ ವೈವಿಧ್ಯತೆ ನಾಶ
- ಕಂಪನಿಗಳು ಗರಿಷ್ಠ ಬೆಲೆ ನಿಗದಿಪಡಿಸುವ ಆತಂಕ
- ಕಂಪನಿ ಸೂಚಿಸಿದ ವಿಧಾನ ಪಾಲಿಸಿದರೆ ಮಾತ್ರ ಪರಿಹಾರ, ದಾಖಲೆಗಳನ್ನು ರೈತ ಹೇಗೆ ನಿರ್ವಹಿಸಬೇಕೆಂಬ ಮಾರ್ಗಸೂಚಿಗಳಿಲ್ಲ
- ಬೀಜಗಳು ಉತ್ತಮ ಇಳುವರಿ ಕೊಡುವಲ್ಲಿವಿಫಲವಾಗದ ಕಂಪನಿಗಳು ಸುಲಭವಾಗಿ ತಪ್ಪಿಸಿಕೊಳ್ಳಬಹುದು
- ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲು ಕಾಯಿದೆಗೆ ಅಧಿಕಾರವಿಲ್ಲ
- ರೈತರು ಬೀಜಗಳ ನೋಂದಣಿ ಮಾಡಿಸುವ ವೇಳೆ ಕೇಳಲಾಗುವ ವರದಿಗಳು, ಇಳುವರಿ ಪ್ರಮಾಣ, ಪರಿಹಾರದ ಮೇಲಾಗುವ ತೊಂದರೆಗಳ ಬಗ್ಗೆ ಸಂಶೋಧನಾತ್ಮಕ ವರದಿ ನೀಡುವುದು ಕಷ್ಟ
from India & World News in Kannada | VK Polls https://ift.tt/2QAzBJz