ಸಿಎಎ ಗಲಾಟೆ, ಜೆಡಿಯುನಿಂದ ಚುನಾವಣಾ ಚಾಣಾಕ್ಯ ಪ್ರಶಾಂತ್‌ ಕಿಶೋರ್‌ ಉಚ್ಚಾಟನೆ

ಪಾಟ್ನಾ: ಸಂಯುಕ್ತ ಜನಾತಾ ದಳ () ಪಕ್ಷದ ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮತ್ತು ಪವನ್‌ ವರ್ಮಾರನ್ನು ಉಚ್ಚಾಟನೆ ಮಾಡಿರುವುದಾಗಿ ಬಿಹಾರ ಮುಖ್ಯಮಂತ್ರಿ ನೇತೃತ್ವದ ಜೆಡಿಯು ಪಕ್ಷ ಹೇಳಿದೆ. ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ ಮತ್ತು ಪ್ರಶಾಂತ್‌ ಕಿಶೋರ್‌ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಇದು ಮಂಗಳವಾದ ತಾರಕಕ್ಕೆ ಏರಿತ್ತು. ಇಬ್ಬರೂ ನಾಯಕರು ಪರಸ್ಪರ ಟೀಕೆಗಳನ್ನು ಮಾಡಿದ್ದರು. ಇದಾದ ಬೆನ್ನಿಗೆ ಇಂದು ಉಚ್ಚಾಟನೆ ನಿರ್ಧಾರ ಹೊರಬಿದ್ದಿದೆ. ಚುನಾವಣಾ ಪ್ರಚಾರ ತಂತ್ರಗಳ ಮೂಲಕ ಭಾರತದ ರಾಜಕಾರಣದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್‌ ಕಿಶೋರ್‌ ಜೆಡಿಯು ಪಕ್ಷ ಸೇರಿ 2018ರಲ್ಲಿ ಉಪಾಧ್ಯಕ್ಷರಾಗಿದ್ದರು. ನಿತೀಶ್‌ ಕುಮಾರ್‌ ನಂತರ ಪಕ್ಷದ ಉನ್ನತ ಹುದ್ದೆಯನ್ನು ಅವರು ನಿಭಾಯಿಸುತ್ತಿದ್ದರು. ಆದರೆ ಸಿಎಎ ವಿರುದ್ಧ ಪ್ರಶಾಂತ್‌ ಕಿಶೋರ್‌ ಮಾಡುತ್ತಿದ್ದ ಕಟು ಟೀಕೆಗಳು ಬಿಜೆಪಿಯ ಮೈತ್ರಿ ಪಕ್ಷದ ನಾಯಕ ನಿತೀಶ್‌ ಸರಿ ಕಾಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ "ಆತ ಪಕ್ಷ ಬಿಟ್ಟು ಹೋದರೆ ನನಗೇನೂ ಸಮಸ್ಯೆ ಇಲ್ಲ. ಆತ ಇರಬೇಕಿದ್ದರೆ ಪಕ್ಷದ ಮೂಲ ರಚನೆಯನ್ನು ಒಪ್ಪಿಕೊಳ್ಳಬೇಕು," ಎಂಬುದಾಗಿ ನಿತೀಶ್‌ ಹೇಳಿದ್ದರು. ಜೊತೆಗೆ ಅಮಿತ್‌ ಶಾ ಶಿಫಾರಸಿನ ಮೇರೆಗೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾಗಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಪ್ರಶಾಂತ್‌ ಕಿಶೋರ್‌, 'ಎಂಥ ಮಟ್ಟಕ್ಕೆ ಇಳಿದು ಬಿಟ್ಟಿರಿ ನಿತೀಶ್‌, ಸುಳ್ಳು ಹೇಳುವುದಕ್ಕೆ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುವುದೇ?' ಎಂದು ಪ್ರಶ್ನಿಸಿದ್ದರು. ಇದರ ನಡುವೆ ಬುಧವಾರ ಜೆಡಿಯು ನಾಯಕ ಅಜಯ್‌ ಅಲೋಕ್‌ ಪ್ರಶಾಂತ್‌ ಕಿಶೋರ್‌ನ್ನು ಕೊರೊನಾ ವೈರಸ್‌ಗೆ ಹೋಲಿಸಿದ್ದರು. "ಈ ವ್ಯಕ್ತಿ ನಂಬಿಕಸ್ಥನಲ್ಲ. ಈತ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್‌ ಕುಮಾರ್‌ ವಿಶ್ವಾಸ ಉಳಿಸಿಕೊಳ್ಳಲಿಲ್ಲ. ಈತ ಎಎಪಿಗಾಗಿ ಕೆಲಸ ಮಾಡುತ್ತಾರೆ, ರಾಹುಲ್‌ ಗಾಂಧಿ ಜೊತೆ ಮಾತನಾಡುತ್ತಾರೆ, ಮಮತಾ ಬ್ಯಾನರ್ಜಿ ಜೊತೆ ಕುಳಿತುಕೊಳ್ಳುತ್ತಾರೆ. ಇವರನ್ನು ಯಾರು ನಂಬುತ್ತಾರೆ? ಈ ಕೊರೊನಾ ವೈರಸ್‌ ನಮ್ಮನ್ನು ಬಿಟ್ಟು ಹೋಗುತ್ತಿರುವುದಕ್ಕೆ ನಮಗೆ ಖುಷಿಯಿದೆ. ಅವರಿಗೆ ಬೇಕಾದಲ್ಲಿಗೆ ಹೋಗಬಹುದು," ಎಂದಿದ್ದರು. ಇದಾದ ಬೆನ್ನಿಗೆ ಸಂಜೆ ವೇಳೆ ಉಚ್ಚಾಟನೆ ನಿರ್ಧಾರ ಹೊರಬಿದ್ದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್‌ ಕಿಶೋರ್‌, "ಧನ್ಯವಾದಗಳು ನಿತೀಶ್‌ ಕುಮಾರ್‌. ಬಿಹಾರ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳುತ್ತಿರುವ ನಿಮಗೆ ನನ್ನ ಅಭಿನಂದನೆಗಳು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ," ಎಂದು ವ್ಯಂಗ್ಯವಾಡಿದ್ದಾರೆ.


from India & World News in Kannada | VK Polls https://ift.tt/2vroueU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...