ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ವಿಮಾನ ಸಂಸ್ಥೆಯ ಶೇ.100ರಷ್ಟು ಪಾಲುದಾರಿಕೆಯನ್ನು ಮಾರಾಟ ಮಾಡುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ 'ಇದು ರಾಷ್ಟ್ರದ್ರೋಹದ ಒಪ್ಪಂದ' ಎಂದು ಜರೆದಿದ್ದಾರೆ. "ಇಂದು ಏರ್ ಇಂಡಿಯಾ ಹೂಡಿಕೆ ಹಿಂಪಡೆತ ಪ್ರಕ್ರಿಯೆ ಆರಂಭಗೊಂಡಿದೆ. ಇದು ಸಂಪೂರ್ಣ ರಾಷ್ಟ್ರದ್ರೋಹದ ಒಪ್ಪಂದವಾಗಿದೆ. ನಾನು ಇದರ ವಿರುದ್ಧ ನಾನು ಕೋರ್ಟ್ ಮೊರೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ. ''ಕಳೆದ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಏರ್ ಇಂಡಿಯಾ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಹೀಗಿರುವಾಗ ಏರ್ ಇಂಡಿಯಾವನ್ನು ಬಲಪಡಿಸುವುದನ್ನು ಬಿಟ್ಟು ಮಾರಾಟ ಮಾಡಲು ಕೇಂದ್ರ ಸರಕಾರ ಏಕೆ ಬಯಸುತ್ತಿದೆ?" ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರದ ಏರ್ ಇಂಡಿಯಾ ಮಾರಾಟದ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸಿದೆ. "ಸರಕಾರದ ಬಳಿ ದುಡ್ಡಿಲ್ಲದ ಸಂದರ್ಭ ಹೀಗೆ ಮಾಡುತ್ತಾರೆ. ಕೇಂದ್ರ ಸರಕಾರದ ಬಳಿ ಹಣವಿಲ್ಲ. ಆರ್ಥಿಕ ಬೆಳವಣಿಗೆ ಶೇ.5ಕ್ಕಿಂತಲೂ ಕಡಿಮೆ ಇದೆ. ನರೇಗಾ ಯೋಜನೆಗೆ ನೀಡಬೇಕಿರುವ ಲಕ್ಷಾಂತರ ರೂಪಾಯಿ ಬಾಕಿಯಿದೆ. ಇದಕ್ಕಾಗಿ ಸರಕಾರ ತನ್ನ ಬಳಿಯಿರುವ ಅಮೂಲ್ಯ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ" ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟೀಕಿಸಿದ್ದಾರೆ.
from India & World News in Kannada | VK Polls https://ift.tt/30WiQNy