ಸಂಪುಟ ವಿಸ್ತರಣ: 9 ಅರ್ಹರಿಗೆ, ಮೂವರು ಮೂಲ ಬಿಜೆಪಿಗರಿಗೆ ಮಂತ್ರಿಗಿರಿ ಖಚಿತ

ಬೆಂಗಳೂರು: ನಿರೀಕ್ಷೆಯಂತೆ ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆಯಾಗಲಿದೆ. ಅರ್ಹರೊಂದಿಗೆ ಮೂಲ ಬಿಜೆಪಿ ಶಾಸಕರಿಗೂ ಅದೃಷ್ಟ ಒಲಿಯಲಿದೆ. ಆದರೆ, ಸಂಪುಟ ಸೇರ್ಪಡೆಯಾಗುವವರ ಪಟ್ಟಿಗೆ ಸಮ್ಮತಿ ಪಡೆಯಲು ಈ ಬಾರಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ಹೋಗುತ್ತಿಲ್ಲ! ಅಂದರೆ ಯಡಿಯೂರಪ್ಪ ಅವರು ಈಗಾಗಲೇ ತಾವು ಸಿದ್ಧಪಡಿಸಿದ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ. ವರಿಷ್ಠರೂ 'ಈ ಪಟ್ಟಿ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅದಕ್ಕಾಗಿ ದಿಲ್ಲಿಗೆ ದೌಡಾಯಿಸುವ ಅಗತ್ಯವಿಲ್ಲ' ಎಂದಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನಲ್ಲಿ ಏನೇ ನಿರ್ಧಾರ ಆಗಬೇಕಿದ್ದರೂ ದಿಲ್ಲಿಯತ್ತ ತೆರಳುವುದು ಅನಿವಾರ್ಯ. ಅದರಲ್ಲೂ ಸಂಪುಟ ವಿಸ್ತರಣೆಯಂಥ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ದಿಲ್ಲಿಗೆ ಹೋಗಲೇಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ, ಈ ಬಾರಿ ಉದ್ದೇಶಕ್ಕೆ ಸಿಎಂ ಅವರನ್ನು ವರಿಷ್ಠರು ದಿಲ್ಲಿಗೆ ಕರೆಸಿಕೊಳ್ಳುತ್ತಿಲ್ಲ ಎನ್ನುವುದೇ ಅಚ್ಚರಿ! ಹುಬ್ಬಳ್ಳಿ ಸಮಾವೇಶದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚಿಸಿದ್ದರು. ದಾವೋಸ್‌ ಪ್ರವಾಸದ ಬಳಿಕ ಸಂಪುಟ ವಿಸ್ತರಿಸಬಹುದು ಎಂಬ ಸೂಚನೆಯನ್ನೂ ನೀಡಿದ್ದರು. ಮಂತ್ರಿಮಂಡಲ ವಿಸ್ತರಣೆಯಲ್ಲಿ 'ಅರ್ಹ'ರಿಗೆ ಸಿಂಹಪಾಲು ನೀಡಬೇಕಿರುವುದರಿಂದ ಪಟ್ಟಿ ಸಿದ್ಧತೆಗೆ ಹೆಚ್ಚಿನ ಕಸರತ್ತು ನಡೆಸುವ ಪ್ರಯಾಸವಿಲ್ಲ. ಮೂಲ ಬಿಜೆಪಿ ಶಾಸಕರಲ್ಲಿ ಹಲವು ಆಕಾಂಕ್ಷಿಗಳಿದ್ದರೂ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತೆ ಅಂಥವರಿಗೆ ತಾಕೀತು ಮಾಡಲಾಗಿದೆ. ಹಾಗಾಗಿ ಸಿಎಂ ದಿಲ್ಲಿ ಭೇಟಿಯಿಲ್ಲದೆ ನೂತನ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ. ಈ ಪಟ್ಟಿ ತಮ್ಮ ಕೈಸೇರುವುದನ್ನು ಸಿಎಂ ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಷರತ್ತುಗಳು ಅನ್ವಯ? ಷರತ್ತುಬದ್ಧವಾಗಿ ಸಂಪುಟ ವಿಸ್ತರಣೆಗೆ ಗ್ರೀನ್‌ ಸಿಗ್ನಲ್‌ ನೀಡುವ ಕಾರ್ಯಸೂಚಿಯೂ ವರಿಷ್ಠರ ಮುಂದಿದೆ. ಮಂತ್ರಿಮಂಡಲ ವಿಸ್ತರಣೆ ಬಯಸಿ ದಿಲ್ಲಿಗೆ ಸಿಎಂ ಬರುವ ಅವಶ್ಯಕತೆಯಿಲ್ಲ. ಅದನ್ನು ಪಕ್ಷ ನೋಡಿಕೊಳ್ಳುತ್ತದೆ. ಯಾರಿಗೆ ಸ್ಥಾನಮಾನ ನೀಡಬೇಕು ಎನ್ನುವುದೂ ಪಕ್ಷಕ್ಕೆ ಬಿಟ್ಟದ್ದಾಗಿದೆ ಎಂಬ ಸಂದೇಶ ರವಾನಿಸುವ ಉದ್ದೇಶವೂ ವರಿಷ್ಠರಿಗಿದೆ. ಜತೆಗೆ ಉತ್ತಮ ಆಡಳಿತ ನೀಡಲು ಮಾರ್ಗದರ್ಶಿ ಸೂತ್ರಗಳನ್ನು ನೀಡಿ ಹೊಸ ಸಚಿವರ ನೇಮಕಕ್ಕೆ ಸಮ್ಮತಿಸಲಾಗುತ್ತದೆ. ವರ್ಷದ ಬಳಿಕ ಸರಕಾರದಲ್ಲಿ ಮಹತ್ವದ ಬದಲಾವಣೆ ಮಾಡುವ ಯೋಚನೆಯೂ ವರಿಷ್ಠರ ಮನಸ್ಸಿನಲ್ಲಿದೆ. ಇಂತಹ ಷರತ್ತುಗಳನ್ನು ಮುಂದಿಟ್ಟು ಈ ಬಾರಿಯ ಸಂಪುಟ ವಿಸ್ತರಣೆಗೆ ಅನುಮತಿ ಕೊಡಲಾಗುತ್ತದೆ. ಈ ಕಾರಣದಿಂದಲೂ ಸಿಎಂ ಅವರಿಗೂ ದಿಲ್ಲಿಗೆ ಬರುವಂತೆ ಬುಲಾವ್‌ ಕೊಟ್ಟಿಲ್ಲವೆಂದು ಹೇಳಲಾಗುತ್ತಿದೆ. ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಬುಧವಾರ ನಡೆಸಬೇಕು ಎನ್ನುವುದು ಸಿಎಂ ಆಲೋಚನೆ. ಈ ಸಂಬಂಧ ಅವರು ಮುಹೂರ್ತ ನಿಗದಿ ಮಾಡಿಕೊಂಡಿದ್ದಾರೆ. ಅಂದು ಆಗದಿದ್ದರೆ ಶುಕ್ರವಾರವಾದರೂ ಆದೀತು ಎಂಬ ನಿರೀಕ್ಷೆಯಲ್ಲಿದ್ದಾರೆ. ಅಷ್ಟರೊಳಗೆ ಹೈಕಮಾಂಡ್‌ನಿಂದ ಗ್ರೀನ್‌ ಸಿಗ್ನಲ್‌ ಬಂದರೆ ಸಿಎಂ ಅಂದುಕೊಂಡಂತೆಯೇ ಸಂಪುಟ ವಿಸ್ತರಣೆಯಾಗಲಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಜತೆಗೆ ಸಿಎಂ ಬಿಎಸ್‌ವೈ ಚರ್ಚಿಸಿದ್ದು, ತಮ್ಮ ಪಟ್ಟಿಯನ್ನು ಅವರಿಗೆ ಒಪ್ಪಿಸಿದ್ದಾರೆ. ಈ ಪಟ್ಟಿ ಹೈಕಮಾಂಡ್‌ ಅಂಗಳ ತಲುಪಿಯೂ ಆಗಿದೆ. ಅರ್ಹ ಶಾಸಕರ ಪೈಕಿ ಮಹೇಶ್‌ ಕುಮಠಳ್ಳಿ, ಶ್ರೀಮಂತ ಪಾಟೀಲ್‌ ಹೊರತುಪಡಿಸಿ ಇತರ 9 ಮಂದಿಗೆ ಸಚಿವ ಸ್ಥಾನ ನೀಡುವುದು ಉಭಯರ ನಡುವಿನ ಮಾತುಕತೆ ವೇಳೆ ಪ್ರಸ್ತಾಪವಾಗಿದೆ. ಹಾಗೆಯೇ ಮೂಲ ಬಿಜೆಪಿಗರಲ್ಲಿ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ ಸಂಪುಟ ಸೇರ್ಪಡೆ ನಿಶ್ಚಿತ. ಮತ್ತೊಂದು ಸ್ಥಾನಕ್ಕೆ ತಿಪ್ಪಾರೆಡ್ಡಿ ಹೆಸರು ಮುಂಚೂಣಿಯಲ್ಲಿದ್ದರೂ ಹಲವರು ಪೈಪೋಟಿ ನೀಡುತ್ತಿದ್ದಾರೆ. ಬಿಎಸ್‌ವೈ ಸೋಮವಾರ ಮೈಸೂರು-ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರವೂ ಅಧಿಕೃತ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಸಂಪುಟ ಸೇರಲಿರುವ ಅರ್ಹರು
  1. ರಮೇಶ್‌ ಜಾರಕಿಹೊಳಿ
  2. ಬಿ.ಸಿ.ಪಾಟೀಲ್‌
  3. ಶಿವರಾಮ ಹೆಬ್ಬಾರ್‌
  4. ಆನಂದ್‌ ಸಿಂಗ್‌
  5. ಡಾ. ಕೆ.ಸುಧಾಕರ್‌
  6. ಎಸ್‌.ಟಿ.ಸೋಮಶೇಖರ್‌
  7. ಬೈರತಿ ಬಸವರಾಜು
  8. ಕೆ.ಗೋಪಾಲಯ್ಯ
  9. ನಾರಾಯಣ ಗೌಡ
ಸಂಪುಟ ಸೇರಲಿರುವ ಮೂಲ ಬಿಜೆಪಿಗರು
  1. ಉಮೇಶ್‌ ಕತ್ತಿ
  2. ಅರವಿಂದ ಲಿಂಬಾವಳಿ
  3. ತಿಪ್ಪಾರೆಡ್ಡಿ
ಸರಕಾರ ಉಳಿಸುವ ದೃಷ್ಟಿಯಿಂದ ಹಿರಿಯ ಸಚಿವರು ಪದತ್ಯಾಗ ಮಾಡಿ ಪಕ್ಷಾಂತರಿಗಳಿಗೆ ದಾರಿ ಮಾಡಿ ಕೊಡಬೇಕು. - ಬಸನಗೌಡ ಪಾಟೀಲ್‌ ಯತ್ನಾಳ, ಶಾಸಕ ಹೈಕಮಾಂಡ್‌ ಸೂಚಿಸಿದರೆ 'ಅರ್ಹ' ಶಾಸಕರಿಗೆ ಅವಕಾಶ ಕೊಡಲು ಸಚಿವ ಸ್ಥಾನ ತ್ಯಾಗಕ್ಕೆ ನಾನು ಸಿದ್ಧ. - ಜೆ.ಸಿ. ಮಾಧುಸ್ವಾಮಿ, ಸಚಿವ ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿಯಾಗಿದೆ. ಬಿಜೆಪಿಗೆ ಹೋದವರು ಅತಂತ್ರರಾಗಿದ್ದಾರೆ. - ಸಿದ್ದರಾಮಯ್ಯ, ಕಾಂಗ್ರೆಸ್‌ ಮುಖಂಡ


from India & World News in Kannada | VK Polls https://ift.tt/2U12dib

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...