ಪಟಾಕಿ ಸಿಡಿದು 8 ಮಕ್ಕಳ ಕಣ್ಣಿಗೆ ಹಾನಿ; ಪಟಾಕಿ ಹೊಡೆಯುವಾಗ ಇರಲಿ ಎಚ್ಚರ, ವೈದ್ಯರ ಸಲಹೆಯೇನು ಗೊತ್ತಾ?

ಬೆಂಗಳೂರು: ನಗರದಲ್ಲಿ ನಡೆದ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವಾಗ ಎಂಟು ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಎರಡು, ನಾರಾಯಣ ನೇತ್ರಾಲಯದಲ್ಲಿ ನಾಲ್ಕು ಹಾಗೂ ಅಗರ್ವಾಲ್‌ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ಗುರುವಾರ ಒಂದೇ ದಿನದಲ್ಲಿ ವರದಿಯಾಗಿವೆ. ಭಾನುವಾರವಷ್ಟೇ ಪಟಾಕಿ ಹಚ್ಚುತ್ತಿದ್ದುದನ್ನು ನೋಡುತ್ತಾ ನಿಂತಿದ್ದ 10 ವರ್ಷದ ಬಾಲಕನ ಕಣ್ಣುಗಳಿಗೆ ಕಿಡಿ ಹಾರಿ ಗಾಯವಾಗಿದೆ. ಆತ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾನೆ. ಬಸವನಗುಡಿಯ 9 ವರ್ಷದ ಆರಹಂ ಖಾನ್‌ ಬುಧವಾರ ರಾತ್ರಿ ಸುಮಾರು 8.30ರ ವೇಳೆಗೆ ಫ್ಲವರ್‌ ಪಾಟ್‌ಗೆ ಹೊತ್ತಿಸಿದ ಸಂದರ್ಭದಲ್ಲಿ ಎರಡೂ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ತಕ್ಷಣಕ್ಕೆ ಹತ್ತಿರದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಿ, ಗುರುವಾರ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಾಲಕ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ದೊಡ್ಡಕಲ್ಲಸಂದ್ರದ 6 ವರ್ಷದ ಬಾಲಕ ಯುವರಾಜ್‌ ಫ್ಲವರ್‌ ಪಾಟ್‌ ಸಿಡಿಸುವಾಗ ಗಾಯಗೊಂಡಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾರಾಯಣ ನೇತ್ರಾಲಯದಲ್ಲಿ ಆರು ವರ್ಷದ ಬಾಲಕಿ, 8 ಮತ್ತು 11 ವರ್ಷದ ಇಬ್ಬರು ಬಾಲಕರು ಹಾಗೂ 40 ವರ್ಷದ ಪುರುಷನೊಬ್ಬ ಚಿಕಿತ್ಸೆ ಪಡೆದಿದ್ದಾರೆ. ಅದೃಷ್ಟವಶಾತ್‌ ಯಾರಿಗೂ ದೊಡ್ಡ ಸಮಸ್ಯೆಯಾಗಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ ತಿಳಿಸಿದ್ದಾರೆ. ಬನಶಂಕರಿಯ 13 ವರ್ಷದ ಬಾಲಕನೊಬ್ಬ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ತೆರಳುತ್ತಿರುವಾಗ ಪಟಾಕಿಯ ಕಿಡಿಯೊಂದು ಕಣ್ಣಿಗೆ ಬಡಿದಿದೆ. ಕೂಡಲೇ ಬಾಲಕನನ್ನು ಚಿಕ್ಕಕಲ್ಲಸಂದ್ರದ ಡಾ. ಅಗರ್ವಾಲ್‌ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕ ಅಪಾಯದಿಂದ ಪಾರಾಗಿದ್ದಾನೆ. ಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರ:ಮಕ್ಕಳು ಪಟಾಕಿ ಹೊಡೆಯುವ ಸಂದರ್ಭದಲ್ಲಿ ದೊಡ್ಡವರು ಮಾರ್ಗದರ್ಶನ ಮಾಡಬೇಕು. ದೊಡ್ಡವರು ಇಲ್ಲದ ಸಂದರ್ಭದಲ್ಲಿ ಮಕ್ಕಳ ಕೈಗೆ ಪಟಾಕಿ ಸಿಗದಂತೆ ನೋಡಿಕೊಳ್ಳಬೇಕು. ಮಕ್ಕಳು ಪಟಾಕಿ ಹೊಡೆಯಬೇಕಾದರೆ ಅನುಸರಿಸಬೇಕಾದ ಎಚ್ಚರಿಕೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎನ್ನುತ್ತಾರೆ ನಾರಾಯಾಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ. ಪಟಾಕಿ ಹಚ್ಚುವಾಗ ಏನು ಮಾಡಬೇಕು?
  • ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು.
  • ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬೇಡಿ.
  • ಸಿಂಥೆಟಿಕ್‌ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಿ ಪಟಾಕಿಗಳನ್ನು ಹಚ್ಚಬೇಡಿ. ಕಾಟನ್‌ ಬಟ್ಟೆ ಬಳಸುವುದು ಒಳ್ಳೆಯದು.
  • ಕೈಯಲ್ಲಿ, ಮುಚ್ಚಿದ ಪೆಟ್ಟಿಗೆಗಳು ಅಥವಾ ಬಾಟಲಿಗಳ ಒಳಗೆ ಪಟಾಕಿಗಳನ್ನು ಸುಡಬೇಡಿ.
  • ಪಟಾಕಿಗಳನ್ನು ಮನೆಯಿಂದ ದೂರದ ಬಯಲು ಪ್ರದೇಶದಲ್ಲಿ ಸಿಡಿಸಬೇಕು.
  • ಒಣಗಿದ ಎಲೆಗಳು ಅಥವಾ ಹುಲ್ಲುಅಥವಾ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಜಾಗದಿಂದ ದೂರದಲ್ಲಿ ಪಟಾಕಿಗಳನ್ನು ಸಿಡಿಸುವುದು ಉತ್ತಮ.
  • ಯಾವುದೇ ಕಾರಣಕ್ಕೂ ಕಂಟೇನರ್‌ಗಳಲ್ಲಿ ಅದರಲ್ಲೂ ಗಾಜು ಅಥವಾ ಲೋಹದ ಕಂಟೇನರ್‌ಗಳಲ್ಲಿ ಪಟಾಕಿ ಹಚ್ಚಬೇಡಿ.
  • ಆರಿ ಹೋದ ಪಟಾಕಿಗಳನ್ನು ಅಥವಾ ಸರಿಯಾಗಿ ಹಚ್ಚಿಕೊಳ್ಳದ ಪಟಾಕಿಗಳನ್ನು ಮತ್ತೆ ಹಚ್ಚಲು ಪ್ರಯತ್ನಿಸಬೇಡಿ.
  • ಐಎಸ್‌ಐ ಗುರುತಿರುವ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಿ.
  • ಪಟಾಕಿ ಹೊಡೆಯುವಾಗ ಉದ್ದನೆಯ ಕಡ್ಡಿ ಬಳಸಿ.
  • ಪಟಾಕಿ ಬಾಕ್ಸ್‌ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ.
  • ಗುಡಿಸಲುಗಳು ಮತ್ತು ಮನೆಗಳಿಂದ ದೂರದಲ್ಲಿರುವ ತೆರೆದ ಸ್ಥಳಗಳಲ್ಲಿ ಮಾತ್ರ ಹಗುರವಾದ 'ರಾಕೆಟ್‌' ಹಚ್ಚಿ.
  • ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು, ಪೆಟ್ರೋಲ್‌ ಬಂಕ್‌ ಬಳಿ ಪಟಾಕಿ ಸಿಡಿಸಬೇಡಿ.
ಸಹಾಯವಾಣಿಪಟಾಕಿ ಹೊಡೆಯುವಾಗ ಕಣ್ಣಿಗೆ ಏನಾದರೂ ಹಾನಿಯಾದರೆ ಮಿಂಟೋ ಆಸ್ಪತ್ರೆಯ ಸಹಾಯವಾಣಿ ಸಂಪರ್ಕಿಸಿ: 9480832430 ಕಣ್ಣಿಗೆ ಹಾನಿಯಾದ ಸಂದರ್ಭದಲ್ಲಿ ವೈದ್ಯರು ನೀಡುವ ಸಲಹೆ
  • ಕಣ್ಣಿನ ಡ್ರಾಫ್ಸ್‌ಗಳನ್ನು ಬಳಸಬೇಡಿ
  • ಕಣ್ಣುಗಳನ್ನು ಉಜ್ಜಬೇಡಿ
  • ಕಣ್ಣುಗಳನ್ನು ತೊಳೆಯಬೇಡಿ
  • ಕಣ್ಣುಗಳ ಮೇಲೆ ಒತ್ತಡ ಹಾಕಬೇಡಿ
  • ಕಣ್ಣಿನಲ್ಲಿ ಸಿಕ್ಕಿಕೊಂಡಿರುವ ಯಾವುದೇ ವಸ್ತುವನ್ನು ಬಲವಂತವಾಗಿ ಹೊರ ತೆಗೆಯಲು ಪ್ರಯತ್ನಿಸಬೇಡಿ.


from India & World News in Kannada | VK Polls https://ift.tt/3EQMWVv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...