ವರದಕ್ಷಿಣೆಗೆಂದು ಅಪ್ಪ ಕೂಡಿಟ್ಟ ₹75 ಲಕ್ಷ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ಕೊಟ್ಟ ಯುವತಿ

ಜೈಪುರ: ಸಾಮಾಜಿಕ ಪಿಡುಗಾಗಿರುವ ಕಾಲಘಟ್ಟದಲ್ಲಿ ತನ್ನ ಅಪ್ಪ ವರದಕ್ಷಿಣೆಗೆಂದು ಮೀಸಲಿಟ್ಟ ₹75 ಲಕ್ಷ ರೂಪಾಯಿಗಳನ್ನು ಮಗಳು ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪಿಸಲು ನೀಡುವ ಮೂಲಕ ಮಾದರಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕಿಶೋರ್‌ ಸಿಂಗ್‌ ಕಾನೋದ್‌ ಅವರು ತನ್ನ ಮಗಳ ಕೈ ಹಿಡಿಯುವ ವರನಿಗೆ ನೀಡಲು ₹75 ಲಕ್ಷ ರೂ. ಮೀಸಲಿಟ್ಟಿದ್ದರು. ಆದರೆ, ಮಗಳು ಅಂಜಲಿ ಕಾನ್ವರ್‌, ನ. 21 ರಂದು ಹಸೆಮಣೆ ಏರುವ ಮೊದಲು ಹಣವನ್ನು ಬಾಲಕಿಯರ ಹಾಸ್ಟೆಲ್‌ ನಿರ್ಮಾಣಕ್ಕೆ ನೀಡಿ ಎಂಬುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ತಂದೆಯು ಮದುವೆ ಬಳಿಕ ಅಷ್ಟೂ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ನೀಡಿದ್ದಾರೆ. ಇಂತಹ ಮಾದರಿ ಕೆಲಸದ ಕುರಿತು ಮಾಧ್ಯಮಗಳು ವರದಿ ಮಾಡಿವೆ. ಲಕ್ಷ ಲಕ್ಷ ರೂ. ವರದಕ್ಷಿಣೆ ಸಿಗುತ್ತದೆ ಎಂದರೆ ಬಾಯಿ ಬಿಡುವ ಗಂಡಂದಿರು ಇರುವಾಗ, ಅಂಜಲಿ ಪತಿ ಮಹಾಂತ ಪ್ರತಾಪ್‌ ಅವರು ಸಹ ಹಣವನ್ನು ಒಳ್ಳೆಯ ಕಾರ್ಯಕ್ಕೆ ನೀಡಲು ಒಪ್ಪಿರುವ ಕುರಿತು ಜಾಲ ತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ‘ಮದುವೆ ಬಳಿಕ ಅಂಜಲಿಯು ತನ್ನ ಇಚ್ಛೆಯ ಕುರಿತು ಮಹಾಂತ ಪ್ರತಾಪ್‌ಗೆ ಪತ್ರದ ಮೂಲಕ ತಿಳಿಸಿದ್ದಾರೆ. ಸಂಬಂಧಿಕರ ಎದುರೇ ಮಹಾಂತ ಪ್ರತಾಪ್‌ ಪತ್ರ ಓದಿದ್ದಾರೆ. ಆಗ ಸಂಬಂಧಿಕರೆಲ್ಲರೂ ಒಳ್ಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಂಜಲಿಯ ತಂದೆಯು, ಖಾಲಿ ಚೆಕ್‌ ಕೊಟ್ಟು, ಎಷ್ಟು ಬೇಕಾದರೂ ಬರೆದುಕೊ ಮಗಳೇ ಎಂದಿದ್ದಾರೆ’ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಧ್ಯಮ ವರದಿ ಫೋಟೋ ತಿಳಿಸಿದೆ. ಈಗಾಗಲೇ ಒಂದು ಕೋಟಿ ರೂ. ವೆಚ್ಚದಲ್ಲಿ ಕಿಶೋರ್‌ ಸಿಂಗ್‌ ಅವರು ಹಾಸ್ಟೆಲ್‌ ನಿರ್ಮಿಸುತ್ತಿದ್ದಾರೆ. ಅದು ಪೂರ್ಣಗೊಳ್ಳಲು ₹50 ರಿಂದ ₹75 ಲಕ್ಷ ರೂಪಾಯಿಗಳ ಅವಶ್ಯಕತೆಯಿದ್ದು, ಹಾಗಾಗಿಯೇ ಅಂಜಲಿಯು ವರದಕ್ಷಿಣೆ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ, ವರದಕ್ಷಿಣೆಗಾಗಿ ಕೈ ಚಾಚುವವರು, ಕಿರುಕುಳ ನೀಡುವವರು, ಸಣ್ಣ ಮೊತ್ತವನ್ನೂ ದಾನ ಮಾಡಲು ಹಿಂಜರಿಯುವವರ ಮಧ್ಯೆ ಲಕ್ಷಾಂತರ ರೂ. ಗಳನ್ನು ಸಾಮಾಜಿಕ ಕಾರ್ಯಕ್ಕೆ ನೀಡಲು ಒಪ್ಪಿದ ಕಿಶೋರ್‌, ಅಂಜಲಿ ಹಾಗೂ ಮಹಾಂತ ಅವರ ಹೃದಯ ವೈಶಾಲ್ಯ ಶ್ಲಾಘನೀಯವಾಗಿದೆ. ದೇಶೆದೆಲ್ಲೆಡೆ ಇರುವ ಇತರ ವರದಕ್ಷಿಣೆ ಪೀಡಕರಿಗೂ ಈ ಘಟನೆ ಮಾದರಿಯಾಗಿದೆ.


from India & World News in Kannada | VK Polls https://ift.tt/3xqT18Q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...