ಸರಕಾರ ಸರಿಯಾಗಿ ಕೆಲಸ ಮಾಡಿದ್ದಿದ್ರೆ ಇಷ್ಟೊಂದು ಕೇಸ್‌ಗಳು ಬರುತ್ತಿರಲಿಲ್ಲ; ಹೈಕೋರ್ಟ್‌ ಕಿಡಿ

ಬೆಂಗಳೂರು: ಸರಕಾರ ತನ್ನ ಕೆಲಸಗಳನ್ನು ತಾನು ಮಾಡುತ್ತಿಲ್ಲ, ಒಂದು ವೇಳೆ ಅದು ಸರಿಯಾಗಿ ಮಾಡಿದ್ದರೆ ಕೋರ್ಟ್‌ಗಳಿಗೆ ಇಷ್ಟೊಂದು ಕೇಸ್‌ಗಳು ಬರುತ್ತಿರಲಿಲ್ಲ ಎಂದು ಹೈಕೋರ್ಟ್‌ ಸರಕಾರದ ವಿರುದ್ಧ ಕಿಡಿಕಾರಿದೆ. ಅಲ್ಲದೆ, ಸರಕಾರ ಮಾಡಬೇಕಾದ ಎಷ್ಟೋ ಕೆಲಸಗಳನ್ನು ನ್ಯಾಯಾಂಗ ತನ್ನ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಮಾಡಿಸುವ ಸ್ಥಿತಿ ಬಂದಿದೆ ಎಂದೂ ಸಹ ಖಾರವಾದ ಮಾತುಗಳಲ್ಲಿ ಹೈಕೋರ್ಟ್‌ ಹೇಳಿತು. ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆ ಸಂಬಂಧ ಲೆಟ್ಜ್ ಕಿಟ್‌ ಫೌಂಡೇಷನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹಿರಿಯ ನ್ಯಾ. ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ಹೊರಹಾಕಿತು. ಕಾನೂನು ಸೇವಾ ಪ್ರಾಧಿಕಾರದ ಪರ ವಾದಿಸಿದ ವಕೀಲೆ ಬಿ.ವಿ. ವಿದ್ಯುಲ್ಲತಾ, ‘ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆ ಕುರಿತು ಪ್ರಾಧಿಕಾರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಈ ಕೆಲಸ ಮುಂದುವರಿಸಲು ಪ್ರಾಧಿಕಾರದ ಬಳಿ ಸಮರ್ಪಕ ಸಿಬ್ಬಂದಿ ಇಲ್ಲ. ಅರೆ ನ್ಯಾಯಿಕ (ಪ್ಯಾರಾ ಲೀಗಲ್‌) ಸ್ವಯಂ ಸೇವಾ ಕಾರ್ಯಕರ್ತರನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು. ಅವರಿಗೆ ವತಿಯಿಂದ ಸಂಭಾವನೆ ಕೊಡಿಸಬೇಕು. ಏಕೆಂದರೆ, ಬಿಬಿಎಂಪಿ ಮಾಡಬೇಕಾದ ಕೆಲಸ ಪ್ರಾಧಿಕಾರ ಮಾಡುತ್ತಿದೆ. ಪಾಲಿಕೆಗೆ ದಂಡ ವಿಧಿಸಿದರೆ ಆ ಹಣ ಸಂಭಾವನೆಗೆ ಬಳಸಿಕೊಳ್ಳಬಹುದು ಎಂದರು. ಅದಕ್ಕೆ ನ್ಯಾ.ಬಿ.ವೀರಪ್ಪ ‘ಸರಕಾರದ ಕೆಲಸಗಳನ್ನು ಪ್ರಾಧಿಕಾರ ಮತ್ತು ಕೋರ್ಟ್‌ಗಳು ಮಾಡಬೇಕಾಗಿದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅಲ್ಲದೆ, ಸಿಬ್ಬಂದಿ ಹಾಗೂ ಆರ್ಥಿಕ ನೆರವಿಲ್ಲದೆ ಒದ್ದಾಡುತ್ತಿರುವ ಕಾನೂನು ಸೇವಾ ಪ್ರಾಧಿಕಾರದ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ತಿಳಿಸಿದರು. ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್‌ ವಾದ ಮಂಡಿಸಿ, ‘ಬೆಂಗಳೂರಿನಲ್ಲಿ ಶೌಚಾಲಯಗಳ ಸ್ಥಿತಿಗತಿ ಕುರಿತು ಕಾನೂನು ಸೇವಾ ಪ್ರಾಧಿಕಾರ ಸಮೀಕ್ಷೆ ನಡೆಸಿ ಸಲ್ಲಿಸಿದ ವರದಿಯಲ್ಲಿಆಘಾತಕಾರಿ ಅಂಶಗಳಿವೆ. ಪ್ರಾಧಿಕಾರದ ಶಿಫಾರಸುಗಳನ್ನು ಜಾರಿಗೊಳಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕಿದೆ. ಪ್ರಾಧಿಕಾರ, ಮಹಿಳಾ ಶೌಚಾಲಯಕ್ಕೆ ಕಿಟಕಿ ಇಲ್ಲದಿರುವುದು, ಸಾರ್ವಜನಿಕ ಶೌಚಾಲಯ ಅಡುಗೆ ಕೋಣೆಯಾಗಿ ಬಳಕೆ ಮಾಡುತ್ತಿರುವ ಕುರಿತು ಉಲ್ಲೇಖಿಸಿದೆ. ಆ ಕುರಿತು ಬಿಬಿಎಂಪಿ ಏನೂ ಕ್ರಮ ಕೈಗೊಂಡಿಲ್ಲ ಎಂದರು. ಆಗ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, ‘ಕಾನೂನು ಸೇವಾ ಪ್ರಾಧಿಕಾರದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಶೌಚಾಲಯಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಯ್ದುಕೊಳ್ಳುವುದು, ಪ್ರಾಧಿಕಾರ ಸೂಚಿಸಿರುವ ನ್ಯೂನತೆಗಳನ್ನು ಸರಿಪಡಿಸುವ ಮೂಲಕ ಉನ್ನತೀಕರಿಸಲು ಮೂರು ವಾರ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಬಿಬಿಎಂಪಿಗೆ ಮೂರು ವಾರ ಕಾಲಾವಕಾಶ ನೀಡಿದ ನ್ಯಾಯಪೀಠ, ಶೌಚಾಲಯಗಳನ್ನು ಉನ್ನತೀಕರಿಸುವ ಬಿಬಿಎಂಪಿ ಕಾರ್ಯವನ್ನು ಪರಿಶೀಲಿಸುವಂತೆ ಕಾನೂನು ಸೇವಾ ಪ್ರಾಧಿಕಾರದ ವಕೀಲರಿಗೆ ಸೂಚಿಸಿತು. ಒಂದು ವೇಳೆ ಪಾಲಿಕೆ ಸರಿಯಾಗಿ ಕಾರ‍್ಯ ನಿರ್ವಹಿಸದಿದ್ದರೆ ಬಿಬಿಎಂಪಿ ಆಯುಕ್ತರನ್ನೇ ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದೂಡಿತು.


from India & World News in Kannada | VK Polls https://ift.tt/3E2pch9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...