ಬೊಮ್ಮಾಯಿ ಅಧಿಕಾರ ಅವಧಿಯ 'ಅನುಮಾನಾಸ್ಪದ' ಟೆಂಡರ್‌ಗಳ ಬಗ್ಗೆ ತನಿಖೆಗೆ ಸಿಎಸ್‌ ಸೂಚನೆ

ಬೆಂಗಳೂರು: ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ 10 ಕೋಟಿ ರೂ.ಗಿಂತ ಹೆಚ್ಚು ಅನುದಾನದ ಎಲ್ಲ ಕಾಮಗಾರಿಗಳಿಗೆ ಸಂಬಂಧಪಟ್ಟ ಪ್ರಕ್ರಿಯೆ, ಬಿಲ್‌ ಪಾವತಿ, ಕಾಮಗಾರಿಗಳ ಬಗ್ಗೆ ನಡೆದ ಕಮಿಷನ್‌ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆಯಾ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌ ಆದೇಶಿಸಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದ 40 ಪರ್ಸೆಂಟ್‌ ಕಮಿಷನ್‌ಗೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ತನಿಖೆಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಈ ಆದೇಶ ನೀಡಿದ್ದು, ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ದಿನದಿಂದ (ಜು. 28) 10 ಕೋಟಿ ರೂ. ಅನುದಾನ ಮೀರಿದ ಎಲ್ಲ ಕಾಮಗಾರಿಗಳಿಗೆ ಸಂಬಂಧಪಟ್ಟ ಟೆಂಡರ್‌ ಪ್ರಕ್ರಿಯೆ ಅಥವಾ ಬಿಲ್‌ ಪಾವತಿ ಬಗ್ಗೆ ಅಕ್ರಮ ನಡೆದಿವೆ ಎಂದು ಕಂಡುಬಂದಿರುವ ಪ್ರಕರಣ, ದೂರುಗಳು ಸಲ್ಲಿಕೆಯಾಗಿರುವ ಪ್ರಕರಣಗಳ ಬಗ್ಗೆ ಕೂಡಲೇ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಗುತ್ತಿಗೆದಾರರ ಸಂಘ ಪ್ರಧಾನಿಯವರಿಗೆ ಬರೆದ ಪತ್ರ ಆಧರಿಸಿ ರಾಜ್ಯದಲ್ಲಿ ಭ್ರಷ್ಟಾಚಾರ ಮೇರೆ ಮೇರಿದ್ದು, ಕೂಡಲೇ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕಾಂಗ್ರೆಸ್‌ ನಿಯೋಗ ಗುರುವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು. ಇದಕ್ಕೂ ಮೊದಲೇ ಟೆಂಡರ್‌ ಪ್ರಕ್ರಿಯೆಗಳ ತನಿಖೆ ಸಂಬಂಧ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. ಸಿಎಂ ಪತ್ರದ ಸಾರಾಂಶ ಆಯ್ದ ಇಲಾಖೆಗಳಲ್ಲಿ ಕಮಿಷನ್‌ ದಂಧೆ ವ್ಯಾಪಕವಾಗಿರುವ ಬಗ್ಗೆ ಜು. 6ರಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿಯವರಿಗೆ ಬರೆದ ಪತ್ರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದೇ ವಿಚಾರವನ್ನಿಟ್ಟುಕೊಂಡು ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸುತ್ತಿರುವ ಬೆನ್ನಲ್ಲೇ ಸಿಎಂ ತನಿಖೆ ನಡೆಸುವಂತೆ ಸೂಚಿಸಿ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಪತ್ರ ಬರೆದಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಕೆಟಿಪಿಪಿ ಕಾಯಿದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಟೆಂಡರ್‌ ಪೂರ್ವ ಅರ್ಹತೆಗಳ ಪರಿಶೀಲನೆ ಹಾಗೂ ನಿಯಮಾನುಸಾರ ಅಂದಾಜು ಪಟ್ಟಿ ಪರಿಶೀಲನೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ಹಾಗೂ ಆರ್ಥಿಕ ತಜ್ಞರನ್ನು ಒಳಗೊಂಡ ಎರಡು ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ಅದರಂತೆ 50 ಕೋಟಿ ರೂ. ಮೀರಿದ ಕಾಮಗಾರಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಟೆಂಡರ್‌ ದಾಖಲೆಗಳನ್ನು ಈ ಸಮಿತಿಗೆ ಸಲ್ಲಿಸಬೇಕು. ಸಮಿತಿಯು ಆ ದಾಖಲೆಗಳನ್ನು ಸಾರ್ವಜನಿಕ ಅವಗಾಹನೆಗೆ ತಂದು, ಅಭಿಪ್ರಾಯವನ್ನೂ ಪಡೆದು ವಿಸ್ತೃತವಾಗಿ ಪರಿಶೀಲಿಸಿದ ಬಳಿಕವಷ್ಟೇ ಟೆಂಡರ್‌ಗೆ ಅನುಮೋದನೆ ನೀಡಬೇಕು. ಇದು ಹೆಚ್ಚು ಪಾರದರ್ಶಕತೆ ತರಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಸ್ತೃತ ತನಿಖೆಗೆ ಮನವಿ ''ನಾನು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಉಲ್ಲೇಖಿಸಲಾದ ಇಲಾಖೆಗಳಲ್ಲಿ ಮಂಜೂರಾದ ಪ್ರಮುಖ ಕಾಮಗಾರಿಗಳನ್ನು ಪರಿಶೀಲಿಸಿ ಲೋಪಗಳು ಕಂಡುಬಂದ ಕಡೆ ವಿಸ್ತೃತ ತನಿಖೆಗೆ ಒಳಪಡಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು,'' ಎಂದು ಸೂಚಿಸಿದ್ದಾರೆ.


from India & World News in Kannada | VK Polls https://ift.tt/30WzwJr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...