200 ಕೋಟಿ ರೂ.ಗೂ ಹೆಚ್ಚು ಅಕ್ರಮ ಶಂಕೆ: ಬಿಡಿಎ ಅಧಿಕಾರಿಗಳ ವಿರುದ್ಧ ಎಸಿಬಿ ಎಫ್ಐಆರ್!

ಬೆಂಗಳೂರು: ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆಯಲು ಸತತ ಐದು ದಿನಗಳಿಂದ ಪರಿಶೀಲನೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು, ಗುರುವಾರ ಕೂಡ ಶೋಧ ಕಾರ್ಯ ಮುಂದುವರಿಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಎಸಿಬಿ ಇನ್ಸ್‌ಪೆಕ್ಟರ್‌ಗಳಾದ ಸಾದಿಕ್‌ ಮತ್ತು ರಾಕೇಶ್‌, ಮಂಜುನಾಥ್‌ ಸೇರಿ ಐವರು ಅಧಿಕಾರಿಗಳು ಬಿಡಿಎ ಕಂಪ್ಯೂಟರ್‌ ವಿಭಾಗದಲ್ಲಿ ಸಂಜೆ ಆರು ಗಂಟೆವರೆಗೂ ದಾಖಲೆಗಳನ್ನು ಪರಿಶೀಲಿಸಿದರು. ನಗರ ಯೋಜನೆ, ಭೂಮಿ ಸ್ವಾಧೀನ ಬಗ್ಗೆ ಕಂಪ್ಯೂಟರ್‌ ವಿಭಾಗದಲ್ಲಿ ಪರಿಶೀಲನೆ ನಡೆಸಿದರು. ಟೌನ್‌ ಪ್ಲಾನಿಂಗ್‌ ವಿಭಾಗದಲ್ಲಿ ಸಿಎ ಪಾರ್ಕ್ ಜಾಗಗಳ ಗೋಲ್‌ಮಾಲ್‌ ಮಾಡಿರುವ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ಬ್ಯಾಗ್‌ಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹಲವು ಕಡತಗಳು ಮತ್ತು ನಿವೇಶನ ಹಂಚಿಕೆಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ 200 ಕೋಟಿ ರೂ.ಗೂ ಅಧಿಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆಗಳನ್ನು ಕಲೆ ಹಾಕಿರುವ ಎಸಿಬಿ ಅಧಿಕಾರಿಗಳು, ಆರೋಪಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಬಿಡಿಎ ಹಿರಿಯ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಲು ಪತ್ರ ವ್ಯವಹಾರ ನಡೆಸಲು ಮುಂದಾಗಿದ್ದಾರೆ. ಈ ಕುರಿತು ಆರೋಪಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಕೋರಿ ಹಿರಿಯ ಸಕ್ಷಮ ಅಧಿಕಾರಿಗಳಿಗೆ ಪತ್ರ ಬರೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಇದುವರೆಗೂ ಬಿಡಿಎನಲ್ಲಿ ಭ್ರಷ್ಟಾಚಾರ ನಡೆದಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ನೂರಕ್ಕೂ ಹೆಚ್ಚು ದೂರುಗಳು ಬಂದಿವೆ. ಹೀಗಾಗಿ, ನಿರ್ದಿಷ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಹೆಚ್ಚು ದೂರು ಬಂದಿರುವುದನ್ನು ಪರಿಗಣಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಅಲ್ಲದೆ, ಪ್ರತಿ ದೂರನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಕ್ರಮ ಬಯಲಿಗೆಳೆಯಲು ಯತ್ನಿಸಲಾಗುವುದು ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದರು. ಅಧಿಕಾರಿಗಳಿಗೆ ನೋಟಿಸ್‌ ಬಿಡಿಎ ಭ್ರಷ್ಟಾಚಾರ ಸಂಬಂಧ ಕೆಲವು ಕಡತಗಳನ್ನು ಬಿಡಿಎ ಅಧಿಕಾರಿಗಳು ನೀಡುತ್ತಿಲ್ಲ. ಈ ಸಂಬಂಧ ಕಡತಗಳು ಹಾಗೂ ಮಾಹಿತಿ ನೀಡುವಂತೆ ಕೆಲ ಅಧಿಕಾರಿಗಳಿಗೂ ನೋಟಿಸ್‌ ನೀಡಲಾಗುವುದು. ಇನ್ನು ಒಂದು ವಾರದೊಳಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಏನಿದು ಪ್ರಕರಣ ಎಸಿಬಿ ಅಧಿಕಾರಿಗಳು ಬಿಡಿಎ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ ಬಿಡಿಎ ಅಧಿಕಾರಿಗಳು ನಿವೇಶನ ಹಂಚಿಕೆ ಹಾಗೂ ಭೂಮಿ ಸ್ವಾಧೀನಪಡಿಸಿಕೊಂಡಿರುವ ಮಾಲೀಕರಿಗೆ ಪರಿಹಾರ ನೀಡುವಲ್ಲಿ ಭಾರಿ ಭ್ರಷ್ಟಾಚಾರವೆಸಗಿರುವ ದಾಖಲೆ ಕಲೆಹಾಕಿದ್ದರು. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಂಟು ನಿವೇಶನಗಳು ನೋಂದಣಿ ಆಗಿರುವುದು, ಅನಾಮಿಕ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿರುವುದು ಹಾಗೂ ಒಂದೇ ನಿವೇಶನವನ್ನು ಮೂರು ಅಥವಾ ನಾಲ್ಕು ಮಂದಿಗೆ ನೋಂದಣಿ ಮಾಡಿರುವುದು ಬೆಳಕಿಗೆ ಬಂದಿತ್ತು. ಇದಲ್ಲದೆ, ಮೂಲ ರೈತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ಅಕ್ರಮ ಮತ್ತು ಕಾರ್ನರ್‌ ಸೈಟು ಹಂಚಿಕೆಯಲ್ಲಿ ದಲ್ಲಾಳಿಗಳ ಮೂಲಕ ಭಾರಿ ಭ್ರಷ್ಟಾಚಾರವೆಸಗಿರುವುದನ್ನು ಬಯಲಿಗೆಳೆದಿದ್ದರು.


from India & World News in Kannada | VK Polls https://ift.tt/3DVWXAz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...