ಹೊಸದಿಲ್ಲಿ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಯುಎಇ ಚರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ() ಶ್ರೀಲಂಕಾ ಆಲ್‌ರೌಂಡರ್ ಅತ್ಯುತ್ತಮ ಸೇರ್ಪಡೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗುಣಗಾನ ಮಾಡಿದ್ದಾರೆ. 2021ರ ಐಪಿಎಲ್ ಯುಎಇ ಲೆಗ್‌ಗೆ ಸ್ಪಿನ್ನರ್ ಆಡಂ ಝಾಂಪ, ವೇಗಿ ಕೇನ್ ರಿಚರ್ಡ್ಸನ್, ಫಿನ್ ಅಲ್ಲೆನ್ ಹಾಗೂ ಡೇನಿಯಲ್ ಸ್ಯಾಮ್ಸ್ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ವಾನಿಂದು ಹಸರಂಗ ಜೊತೆಗೆ ದುಷ್ಮಾಂತ ಚಮೀರಾ ಹಾಗೂ ಟಿಮ್ ಡೇವಿಡ್ ಅವರನ್ನು ಯುಎಇ ಚರಣಕ್ಕೆ ಸೇರಿಸಿಕೊಂಡಿದೆ. ಚುಟುಕು ಕ್ರಿಕೆಟ್‌ನಲ್ಲಿ ವಾನಿಂದು ಹಸರಂಗ ಅದ್ಭುತ ದಾಖಲೆಯನ್ನು ಹೊಂದಿದ್ದಾರೆಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ. "ಆಡಂ ಝಾಂಪ ಅವರು ಆರ್‌ಸಿಬಿಗೆ ಲಭ್ಯರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ವಾನಿಂದು ಹಸರಂಗ ಅವರನ್ನು ಬೆಂಗಳೂರು ಫ್ರಾಂಚೈಸಿ ಸೇರ್ಪಡೆ ಮಾಡಿಕೊಂಡಿದೆ. 2021ರ ಐಪಿಎಲ್ ಆಟಗಾರರ ಹರಾಜಿನಲ್ಲಿ ವಾನಿಂದು ಹಸರಂಗ ಕಾಣಿಸಿಕೊಂಡಿರಲಿಲ್ಲ ಎಂದು ಭಾವಿಸುತ್ತೇನೆ. ಅಂದಹಾಗೆ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಕಾರಣ ಅವರನ್ನು ಆರ್‌ಸಿಬಿ ಆಯ್ಕೆ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ," ಎಂದು ಚೋಪ್ರಾ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯುಜ್ವೇಂದ್ರ ಚಹಲ್ ಹಾಗೂ ವಾನಿಂದು ಹಸರಂಗ ಅವರನ್ನು ಜೊತೆಯಲ್ಲಿ ಆಡಿಸಬೇಕೆಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ. "ಶ್ರೀಲಂಕಾ ತಂಡದ ಪರ ವಾನಿಂದು ಹಸರಂಗ ಅದ್ಭುತ ಹೆಸರು ಮಾಡಿದ್ದಾರೆ. ಆಡಿದ ಪ್ರತಿಯೊಂದು ಪಂದ್ಯದಲ್ಲಿ ವಾನಿಂದು ತಂಡಕ್ಕೆ ಕೊಡುಗೆ ನೀಡಿದ್ದಾರೆ. ಹಾಗಾಗಿ, ಲಂಕಾ ಆಲ್‌ರೌಂಡರ್‌ಗೆ ಆರ್‌ಸಿಬಿ ಅವಕಾಶ ನೀಡಿರುವುದು ಅದ್ಭುತ ನಿರ್ಧಾರ. ನಿಮಗೆ ಬೇಕಾದರೆ, ಯುಜ್ವೇಂದ್ರ ಚಹಲ್ ಹಾಗೂ ವಾನಿಂದು ಹಸರಂಗ ಇಬ್ಬರನ್ನೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಬಹುದು," ಎಂದು ತಿಳಿಸಿದ್ದಾರೆ. ಇದುವರೆಗೂ 60 ಟಿ20 ಪಂದ್ಯಗಳಾಡಿರುವ ವಾನಿಂದು ಹಸರಂಗ 80 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 33 ವಿಕೆಟ್‌ಗಳು 22 ಪಂದ್ಯಗಳಿಂದ ಮೂಡಿ ಬಂದಿರುವುದು ವಿಶೇಷ. ಅಷ್ಟೇ ಅಲ್ಲದೆ, ಸ್ಪಿನ್ ಬೌಲಿಂಗ್ ಜೊತೆಗೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿಗೆ ಬ್ಯಾಟಿಂಗ್ ಡೆಪ್ತ್ ತಂದುಕೊಡಲಿದ್ದಾರೆ. ಆರ್‌ಸಿಬಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ನೂತನ ಕೋಚ್ ಮೈಕ್ ಹೇಸನ್, "ಆಡಂ ಝಾಂಪ ಅವರ ಸ್ಥಾನಕ್ಕೆ ವಾನಿಂದು ಹಸರಂಗ ಅವರನ್ನು ಆಯ್ಕೆ ಮಾಡಿದ್ದೇವೆ. ಮುಷ್ಠಿ ಸ್ಪಿನ್ ಜೊತೆಗೆ ವಾನಿಂದು, ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಉತ್ತಮ ಸಂಯೋಜನೆಯನ್ನು ತಂದುಕೊಡಬಲ್ಲರು. ಹಾಗಾಗಿ, ಅವರನ್ನು ಕರೆದುಕೊಂಡಿರುವುದಕ್ಕೆ ನಮಗೆ ಖುಷಿಯಾಗಿದೆ," ಎಂದಿದ್ದರು. "ಶ್ರೀಲಂಕಾದ ಮತ್ತೊಬ್ಬ ಆಟಗಾರ ದುಷ್ಮಾಂತ ಚಮೀರಾಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚಮೀರಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಉತ್ತಮ ವೇಗವನ್ನು ಹೊಂದಿರುವ ಅವರು, ಕಳೆದ ಹಲವು ವರ್ಷಗಳಿಂದ ಶ್ರೀಲಂಕಾ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ," ಎಂದು ನೂತನ ಕೋಚ್ ತಿಳಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3D7m5EM