ಲಸಿಕೆ ಪಡೆದರೂ ಕೋವಿನ್‌ ಪೋರ್ಟಲ್‌ನಲ್ಲಿ ಹೆಸರೇ ಇಲ್ಲ..! ಹೊರರಾಜ್ಯ, ವಿದೇಶಕ್ಕೆ ಹೋಗುವವರಿಗೆ ಟೆನ್ಶನ್..!

ಮಹಾಬಲೇಶ್ವರ ಕಲ್ಕಣಿ : ವಿವಿಧ ಸಂಘಟನೆಗಳು, ಹಲವು ಪಕ್ಷದ ರಾಜಕೀಯ ಮುಖಂಡರು ಏರ್ಪಡಿಸಿದ್ದ ಲಸಿಕಾ ಅಭಿಯಾನದಲ್ಲಿ ಹಾಕಿಸಿಕೊಂಡ ಬಹಳಷ್ಟು ಜನರಿಗೆ ತಿಂಗಳು ಕಳೆದರೂ ಮೊಬೈಲ್‌ಗೆ ದೃಢೀಕರಣ ಮೆಸೇಜ್‌ ಬಂದಿಲ್ಲ. ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿಯೂ ಆಗಿಲ್ಲ. ಇದರಿಂದ ಹೊರ ರಾಜ್ಯ ಮತ್ತು ವಿದೇಶಕ್ಕೆ ಹೋಗುವವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಆಯೋಜಿಸಿದ್ದ ಲಸಿಕಾ ಅಭಿಯಾನದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ನೀಡಲಾಗಿದೆ. ಇದನ್ನು ಪಡೆದ ಬಹುತೇಕರಿಗೆ ಆ ಕೂಡಲೇ ಮೆಸೆಜ್‌ ಬಂದರೆ, ಇನ್ನೂ ಕೆಲವರಿಗೆ 24 ಗಂಟೆ ಒಳಗೆ ಮೆಸೇಜ್‌ ಬಂದಿದೆ. ಕೆಲವರಿಗೆ ಮಾತ್ರ ಎರಡು ತಿಂಗಳು ಕಳೆದರೂ ಮೆಸೇಜ್‌ ಬಂದಿಲ್ಲ. ಕೋವಿಡ್‌ ಹಿನ್ನಲೆಯಲ್ಲಿ ಯಾವುದೇ ರಾಜ್ಯಕ್ಕೆ, ವಿದೇಶಕ್ಕೆ ಹೋಗುವವವರಿಗೆ ಕೋವಿಡ್‌ ಲಸಿಕಾ ಪ್ರಮಾಣಪತ್ರ ಕಡ್ಡಾಯ. ಕೆಲವರು ಲಸಿಕೆ ಪಡೆದರೂ 72 ಗಂಟೆಗಳ ಕೋವಿಡ್‌ ಪರೀಕ್ಷೆ ಮಾಡಿಕೊಂಡು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. 'ನಾನು ಸ್ಥಳೀಯ ಶಾಸಕರೊಬ್ಬರು ಏರ್ಪಡಿಸಿದ್ದ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆದಿದ್ದೆ. ಲಸಿಕಾ ಅರ್ಜಿಯನ್ನು ಕ್ರಮಬದ್ಧವಾಗಿ ತುಂಬಿಯೇ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದಾಕ್ಷಣ ಮೆಸೇಜ್‌ ಬರಬೇಕಿತ್ತು, ಬಂದಿಲ್ಲ. ನೋಂದಣಿ ಮಾಡುತ್ತಿರುವವರನ್ನು ಕೇಳಿದರೆ ಒಂದೆರಡು ದಿನಗಳಲ್ಲಿ ಬರುತ್ತದೆ ಎಂದು ಹೇಳಿದ್ದರು. ಎರಡು ತಿಂಗಳು ಕಳೆದರೂ ಮೆಸೇಜ್‌ ಬಂದಿಲ್ಲ. ಕೋವಿನ್‌ ಪೋರ್ಟಲ್‌ನಲ್ಲೂ ಲಸಿಕೆ ಪಡೆದ ಬಗ್ಗೆ ನೋಂದಣಿ ಆಗಿಲ್ಲ' ಎನ್ನುತ್ತಾರೆ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆದ ಖಾಸಗಿ ಉದ್ಯೋಗಿ ಸಂತೋಷ್‌. 'ನಾನು ಲಸಿಕೆ ಪಡೆದ ದಿನ ಸುಮಾರು ಐದು ಸಾವಿರ ಜನರು ಲಸಿಕೆ ಪಡೆಯುವುದಕ್ಕೆ ಬಂದಿದ್ದರು. ನನ್ನ ಜತೆಗೆ ಇನ್ನೂ ನಾಲ್ಕೈದು ಸ್ನೇಹಿತರೂ ಬಂದಿದ್ದರು. ಅವರ ಹೆಸರೂ ಕೂಡ ಕೋವಿನ್‌ನಲ್ಲಿ ದಾಖಲಾಗಿಲ್ಲ' ಎಂದು ಅವರು ಹೇಳಿದರು. ಮೊದಲ ಡೋಸ್‌ ಪಡೆದ ಬಗ್ಗೆ ದಾಖಲೆ ಇಲ್ಲದವರು ಏನು ಮಾಡಬೇಕು ಎನ್ನುವುದಕ್ಕೆ ಸರಕಾರ ಇದುವರೆಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡದೇ ಇರುವುದು ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ. ಲಸಿಕೆ ವ್ಯರ್ಥ: 'ಕೋವಿಶೀಲ್ಡ್‌ ಮೊದಲ ಡೋಸ್‌ ಪಡೆದು 84 ದಿನವಾದರೆ ಎರಡನೇ ಡೋಸ್‌ ಪಡೆಯಬಹುದು. ಕೋವಿನ್‌ ಪೋರ್ಟಲ್‌ನಲ್ಲಿ ದಾಖಲಾಗದ ಕಾರಣಕ್ಕೆ ಮಾತ್ರ ಲಸಿಕೆ ಮುಂದೂಡುವ ಅವಶ್ಯಕತೆ ಇರುವುದಿಲ್ಲ. ದಾಖಲಾತಿ ವಿಷಯಕ್ಕೆ ಬಂದರೆ ಇದು ಮೊದಲ ಡೋಸ್‌ ಎಂದು ಪರಿಗಣಿಸಲಾಗುತ್ತದೆ. ಲಸಿಕೆ ಪಡೆದೂ ಕೋವಿನ್‌ನಲ್ಲಿ ದಾಖಲಾಗದೇ ಇದ್ದರೆ ಲಸಿಕೆಯ ವ್ಯರ್ಥದ ಪ್ರಮಾಣ ಹೆಚ್ಚಾಗುತ್ತದೆ' ಎನ್ನುತ್ತಾರೆ ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ಮಣಿಪಾಲ ಆಸ್ಪತ್ರೆ ಮುಖ್ಯಸ್ಥ ಸುದರ್ಶನ್‌ ಬಲ್ಲಾಳ. 'ಎಲ್ಲಿ ಲಸಿಕೆ ನೀಡಲಾಗುತ್ತದೆಯೋ ಅಲ್ಲಿಯೇ ತಕ್ಷಣ ನೋಂದಣಿ ಮಾಡಬೇಕು. ಒಂದು ವೇಳೆ ನೋಂದಣಿಯಲ್ಲಿ ವ್ಯತ್ಯಯವಾದಲ್ಲಿ, ಯಾವ ಪಿಎಚ್‌ಸಿ ಮುಖಾಂತರ ಲಸಿಕೆ ನೀಡಲಾಗಿದೆ ಎನ್ನುವುದನ್ನು ಪರಿಶೀಲಿಸಿ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಕಂಡು ಹಿಡಿದು ಸರಿಪಡಿಸಲಾಗುವುದು' ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ. ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.


from India & World News in Kannada | VK Polls https://ift.tt/3gEDQ4F

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...