ಒಂದೇ ದಿನ ಒಂದು ಕೋಟಿಗೂ ಅಧಿಕ ಡೋಸ್ ಲಸಿಕೆ: ಭಾರತದ ಹೊಸ ಸಾಧನೆ

ಹೊಸದಿಲ್ಲಿ: ಲಸಿಕೆಗಳ ವಿಚಾರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಶುಕ್ರವಾರ ಒಂದೇ ದಿನ ಒಂದು ಕೋಟಿಗೂ ಅಧಿಕ ಡೋಸ್‌ಗಳನ್ನು ಅಭಿಯಾನದ ಮೂಲಕ ಸಾಧಿಸಲಾಗಿದೆ. ಇದು ಜನವರಿಯಲ್ಲಿ ಲಸಿಕೆ ಬಳಕೆ ಆರಂಭವಾದಾಗಿನಿಂದ ದಿನವೊಂದರ ಅತ್ಯಧಿಕ ಸಂಖ್ಯೆಯಾಗಿದೆ. ಪ್ರತಿರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಅಭಿನಂದಿಸಿದ್ದಾರೆ. 'ಇಂದು ಲಸಿಕೀಕರಣ ಸಂಖ್ಯೆಯಲ್ಲಿ ದಾಖಲೆ! ಒಂದು ಕೋಟಿಯನ್ನು ದಾಟುವುದು ಮಹತ್ವದ ಸಾಧನೆ. ಲಸಿಕೆ ಪಡೆದುಕೊಳ್ಳುತ್ತಿರುವವರಿಗೆ ಮತ್ತು ಈ ಲಸಿಕೀಕರಣ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವವರಿಗೆ ಅಭಿನಂದನೆಗಳು' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಆರೋಗ್ಯ ಕಾರ್ಯಕರ್ತರ ಕಠಿಣ ಪರಿಶ್ರಮ ಮತ್ತು ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಫಲಿತಾಂಶ ನೀಡುತ್ತಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ನಮ್ಮ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ದಿನವೊಂದರಲ್ಲಿ ಸಾಧಿಸಲಾದ ಅತ್ಯಧಿಕ ಲಸಿಕೀಕರಣ ಇದು ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ಒಂದೇ ದಿನ 1,02,06,475 ಡೋಸ್ ಲಸಿಕೆ ನೀಡಲಾಗಿದೆ ಎಂದು ಕೋವಿನ್ ಪೋರ್ಟಲ್‌ನಲ್ಲಿನ ದತ್ತಾಂಶಗಳು ತಿಳಿಸಿವೆ. ಈವರೆಗೂ ದೇಶಾದ್ಯಂತ 62 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ದೇಶದಲ್ಲಿ 14 ಕೋಟಿಗೂ ಅಧಿಕ ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶವು 28.62 ಲಕ್ಷ ಡೋಸ್ ಲಸಿಕೆಗಳನ್ನು ನೀಡಿದ್ದು, ಇದು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನದಲ್ಲಿ ಇರುವ ಕರ್ನಾಟಕದಲ್ಲಿ 10.79 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೋವಿನ್ ವೆಬ್‌ಸೈಟ್ ದಾಖಲೆಗಳು ತಿಳಿಸಿವೆ. ಮುಂಬರುವ ಹಬ್ಬಗಳ ಅವಧಿಯ ವೇಳೆ ಕೋವಿಡ್ ಹರಡದಂತೆ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಸಚಿವಾಲಯ ಪತ್ರ ಬರೆದಿದೆ. ಈ ಎರಡೂ ರಾಜ್ಯಗಳಲ್ಲಿ ಐದು ಹಂತಗಳ ಕಾರ್ಯತಂತ್ರ ಅನುಸರಿಸಬೇಕೆಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ. ದೇಶದ ಎಲ್ಲ ರಾಜ್ಯಗಳೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 18-44 ವರ್ಷದ ವಿಭಾಗದಲ್ಲಿ 23,72,15,353 ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟು 2,45,60,807 ಮಂದಿ ಎರಡು ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಭಾರತದಲ್ಲಿ ಕೋವಿಡ್ ಪ್ರಕರಣಭಾರತದಲ್ಲಿ ಶುಕ್ರವಾರ 46,759 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 31,374 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, 509 ರೋಗಿಗಳು ಕಳೆದ 24 ಗಂಟೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಶನಿವಾರ ತಿಳಿಸಿದೆ. ಇದು ಕಳೆದ ಎರಡು ತಿಂಗಳಲ್ಲಿಯೇ ಅತ್ಯಧಿಕ ಪ್ರಕರಣ ಸಂಖ್ಯೆಯಾಗಿದೆ. ಕೇರಳದಲ್ಲಿ 32,801 ಪ್ರಕರಣಗಳು ವರದಿಯಾಗಿವೆ.


from India & World News in Kannada | VK Polls https://ift.tt/3yvdTuw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...