ಹೊಸದಿಲ್ಲಿ: ಹಿಂದಿನ ತಲೆ ಮಾರಿನ ಭಾರತ ತಂಡಕ್ಕಿಂತ ವಿರಾಟ್ ಕೊಹ್ಲಿ ನಾಯಕತ್ವದ ಈಗಿನ ಭಾರತ ತಂಡ ಎಲ್ಲಾ ರೀತಿಯಲ್ಲಿಯೂ ಬಲಿಷ್ಠವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ನಾಯಕ ನಾಸಿರ್ ಹುಸೇನ್‌ಗೆ ಬ್ಯಾಟಿಂಗ್ ದಿಗ್ಗಜ ತಿರುಗೇಟು ನೀಡಿದ್ದಾರೆ. ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಕಾದಾಟ ಒಂದು ಕಡೆ ಸುದ್ದಿಯಾಗುತ್ತಿದ್ದರೆ, ಕಾಮಂಟರಿ ಬಾಕ್ಸ್‌ನಲ್ಲಿ ಮಾಜಿ ಕ್ರಿಕೆಟಿಗರಾದ ಸುನೀಲ್ ಗವಾಸ್ಕರ್ ಹಾಗೂ ನಡುವಿನ ಚರ್ಚೆ ಮತ್ತೊಂದು ಕಡೆ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಯುಕೆಯ ಡೈಲಿ ಮೇಲ್‌ನಲ್ಲಿ ಅಂಕಣ ಬರೆದಿದ್ದ ನಾಸಿರ್ ಹುಸೇನ್, ಹಿಂದಿನ ಭಾರತ ತಂಡದಂತೆ ಈಗಿನ ವಿರಾಟ್ ಕೊಹ್ಲಿ ನಾಯಕತ್ವದ ಅಷ್ಟೊಂದು ಹಿಂಸೆಗೆ ಒಳಗಾಗುತ್ತಿಲ್ಲ ಎಂದಿದ್ದರು. ಇಂಗ್ಲೆಂಡ್ ಮಾಜಿ ನಾಯಕನ ಈ ಹೇಳಿಕೆಗೆ ಸುನೀಲ್ ಗವಾಸ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ನಾಸಿರ್ ಹುಸೇನ್ ಇಂತಹ ಹೇಳಿಕೆ ನೀಡುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಪ್ರವಾಸ ಮಾಡಿದಾಗ ನಮ್ಮ ತಂಡ ಯಾವತ್ತೂ ಹಿಂಸೆಗೆ ಒಳಗಾಗಿರಲಿಲ್ಲ ಹಾಗೂ ಯಾವುದೇ ವಿಚಾರಕ್ಕೂ ನಾವು ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಗವಾಸ್ಕರ್ ಪ್ರತಿಪಾದಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ಅಥರ್ಟನ್, ನಾಸಿರ್ ಹುಸೇನ್ ಪರವಾಗಿ ಸುನೀಲ್ ಗವಾಸ್ಕರ್ ಬಳಿ ಸಂದಾನ ಮಾಡಲು ಪ್ರಯತ್ನಿಸಿದರು. ಆದರೆ, ಇದರಿಂದ ಒಂದು ಹೆಜ್ಜೆ ಹಿಂದೆ ಇಡುವುದಿಲ್ಲ ಎಂದು ಬ್ಯಾಟಿಂಗ್ ದಿಗ್ಗಜ ಕಡ್ಡಿ ಮುರಿದಂತೆ ಹೇಳಿದರು. "ನಾಸಿರ್ ಹುಸೇನ್ ಹೇಳಿಕೆ ಪರವಾಗಿ ನಾನು ಸಂದಾನ ಮಾಡುತ್ತೇನೆ," ಎಂದು ಮೈಕಲ್ ಅಥರ್ಟನ್ ಅವರು ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಹೇಳಿದರು. ಆದರೆ, ಸುನೀಲ್ ಗವಾಸ್ಕರ್ ತಮ್ಮ ನಿಲುವು ಬದಲಾಯಿಸಲು ನಿರಾಕರಿಸಿದರು. "ನಾನೆಂದಿಗೂ ಹೆಜ್ಜೆ ಹಿಂದೆ ಇಡುವುದಿಲ್ಲ, ಈಗಲೂ ಅಷ್ಟೇ ನನ್ನ ನಿಲುವನ್ನು ಬದಲಿಸುವ ಮಾತೇ ಇಲ್ಲ. ನನ್ನ ಬಗ್ಗೆ ಚೆನ್ನಾಗಿ ಗೊತ್ತಿರುವ ವ್ಯಕ್ತಿಗಳಿಗೆ ನಾನು ಏನೆಂಬುದು ತಿಳಿದಿದೆ," ಎಂದು ಗವಾಸ್ಕರ್ ಹೇಳಿದರು. ತಮ್ಮ ನಿಲುವಿನ ಬಗ್ಗೆ ವಾದ ಮಂಡಿಸುತ್ತಿದ್ದ ವೇಳೆ ಸುನೀಲ್ ಗವಾಸ್ಕರ್, ತಮ್ಮ ಕಾಲದಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ತೋರಿದ್ದ ಪ್ರದರ್ಶನದ ಐದು ವಿಭಿನ್ನ ನಿದರ್ಶನಗಳನ್ನು ವಿವರಿಸಿದರು ಹಾಗೂ ನಾಸಿರ್ 'ಹಿಂಸೆಯ' ಹೇಳಿಕೆಗೆ ಸ್ಪಷ್ಟನೆ ನೀಡಿದರು. "ಹಿಂದಿನ ತಲೆಮಾರಿನ ಭಾರತ ತಂಡದಂತೆ ಈಗಿನ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಹಿಂಸೆಗೆ ಒಳಗಾಗುವುದಿಲ್ಲವೆಂದು ನೀವು ಹೇಳಿದ್ದೀರಿ. ಹಿಂದಿನ ಪೀಳಿಗೆಗೆ ಸೇರಿದ ನೀವು, ಬಹುಶಃ ಯಾವ ಪೀಳಿಗೆಗೆ ಜ್ಞಾನೋದಯ ನೀಡಬಹುದು? ಹಾಗೂ ಹಿಂಸೆಯ ಸರಿಯಾದ ಅರ್ಥವೇನು?" ಎಂದು ಗವಾಸ್ಕರ್ ಮೂರನೇ ಟೆಸ್ಟ್ ಮೊದಲನೇ ದಿನ ಹುಸೇನ್‌ಗೆ ಪ್ರಶ್ನೆ ಕೇಳಿದರು. "ನೀವು ನಮ್ಮ ದಾಖಲೆಗಳನ್ನು ಒಮ್ಮೆ ನೋಡಬಹುದು, 1971ರಲ್ಲಿ ನಾವು ಗೆದ್ದಿದ್ದೇವೆ, ಇದು ನನ್ನ ಪಾಲಿಗೆ ಮೊದಲನೇ ಇಂಗ್ಲೆಂಡ್ ಪ್ರವಾಸವಾಗಿತ್ತು. 1974ರಲ್ಲಿ ನಾವು ಆಂತರಿಕೆ ಸಮಸ್ಯೆಯಿಂದಾಗಿ 3-0 ಅಂತರದಲ್ಲಿ ಸೋತಿದ್ದೆವು. 1979ರಲ್ಲಿ 1-0 ಅಂತರದಲ್ಲಿ ಸೋತಿದ್ದೇವೆ, ಒಂದು ವೇಳೆ ದಿ ಓವಲ್‌ನಲ್ಲಿ 438 ರನ್ ಚೇಸ್ ಮಾಡಿದ್ದರೆ, 1-1 ಡ್ರಾ ಆಗಿರುತ್ತಿತ್ತು(ಭಾರತ 429ಕ್ಕೆ 8 ಪಂದ್ಯ ಮುಗಿಸಿತ್ತು)," ಎಂದರು. "1982ರಲ್ಲಿ ನಾವು 1-0 ಅಂತರದಲ್ಲಿ ಸೋಲು ಅನುಭವಿಸಿದ್ದೆವು. 1986ರಲ್ಲಿ ನಾವು 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದ್ದೆವು, ಈ ವೇಳೆ ನಾವು 3-0 ಅಂತರದಲ್ಲಿ ಗೆಲ್ಲಬೇಕಾಗಿತ್ತು. ಇದರ ಹೊರತಾಗಿಯೂ ನಮ್ಮ ತಲೆಮಾರಿನ ತಂಡ ಹಿಂಸೆಗೆ ಒಳಗಾಗಿತ್ತು ಎಂದು ನಾನು ಭಾವಿಸುವುದಿಲ್ಲ," ಎಂದು ಸುನೀಲ್ ಗವಾಸ್ಕರ್, ನಾಸಿರ್ ಹುಸೇನ್‌ಗೆ ತಿರುಗೇಟು ನೀಡಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jlbzBJ