ಕೋವಿಡ್ ಆತಂಕ: ಸೋಮವಾರ ತಜ್ಞರ ಜೊತೆ ಬಸವರಾಜ ಬೊಮ್ಮಾಯಿ ಸಭೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೋಮವಾರ ತಜ್ಞರ ಜೊತೆ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ಸಭೆ ನಡೆಯಲಿದ್ದು, ಕೈಗೊಳ್ಳಬೇಕಾಗಿರುವ ಮುಂಜಾಗರೂಕತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಒಂದು ಕಡೆಯಲ್ಲಿ ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಡೆ ಸಾಲು ಸಾಲು ಹಬ್ಬಗಳು ಎದುರಾಗುತ್ತಿವೆ. ಈ ನಡುವೆ ಶಾಲಾ ಕಾಲೇಜುಗಳ ಆರಂಭಗೊಂಡಿದೆ. 1 ರಿಂದ 8 ನೇ ತರಗತಿಯ ವರೆಗಿನ ಮಕ್ಕಳಿಗೂ ಭೌತಿಕ ತರಗತಿಗಳು ಆರಂಭಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಕುರಿತಾಗಿ ಚರ್ಚೆ ನಡೆಯಲಿದೆ. ಇನ್ನು ನೆರೆ ರಾಜ್ಯ ಕೇರಳದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಕೊಡಗು, ಮೈಸೂರು ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹೇರಲಾಗಿದೆ. ಸದ್ಯಕ್ಕೆ ಕೋವಿಡ್ ನಿಯಂತ್ರಣದಲ್ಲಿ ಇದ್ದರೂ ಜನಪ್ರತಿನಿಧಿಗಳು ಹಾಗೂ ಜನರ ಅಜಾಗರೂಕತೆಯಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗುತ್ತಾ? ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವನ್ನು ಸರ್ಕಾರ ನೀಡುತ್ತಾ ಎಂಬ ಕುತೂಹಲ ಕೆರಳಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಪ್ರತಾಪಸಿಂಹ ಸೇರಿದಂತೆ ಜನಪ್ರತಿನಿಧಿಗಳು ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಸೋಮವಾರ ಸಂಜೆ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ ಕೋವಿಡ್ ಭೀತಿ ಇರುವುದರಿಂದ ಅವಕಾಶ ನೀಡುವ ಸಾಧ್ಯತೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ನಿರ್ಧಾರವೇ ಅಂತಿಮವಾಗಲಿದೆ. ಮತ್ತೊಂದು ಕಡೆಯಲ್ಲಿ ಶಾಲೆ ಆರಂಭದ ಬಗ್ಗೆಯೂ ಒತ್ತಡ ಹೆಚ್ಚಾಗುತ್ತಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಯೂ ಈ ನಿಟ್ಟಿನಲ್ಲಿ ಒತ್ತಡ ಹೇರುತ್ತಿದೆ. ಆದರೆ ಕೋವಿಡ್ ಮೂರನೇ ಅಲೆಯ ಸಾಧ್ಯತೆ ಕಾರಣದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳುತ್ತಾ ಎಂಬುವುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕೋವಿಡ್ ಮೂರನೇ ಅಲೆಗೆ ಸಿದ್ಧತೆ, ವ್ಯಾಕ್ಸಿನ್ ಹೆಚ್ಚಳಕ್ಕೆ ಕ್ರಮ ಮುಂತಾದ ವಿಚಾರಗಳ ಕುರಿತಾಗಿ ಸೋಮವಾರ ತಜ್ಞರ ಜೊತೆ ಮಹತ್ವದ ಸಭೆ ನಡೆಯಲಿದೆ. ಸಭೆಯ ಬಳಿಕ ಈ ವಿಚಾರಗಳ ಕುರಿತಾಗಿ ತೀರ್ಮಾನ ಪ್ರಕಟಗೊಳ್ಳಲಿದೆ.


from India & World News in Kannada | VK Polls https://ift.tt/3mL5pgq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...