ಹೊಸದಿಲ್ಲಿ: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಗೆಲ್ಲುವ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಕೂಡ ವಿರೋಧಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಅದರಂತೆ ಐದನೇ ದಿನ ಬೆಳಗ್ಗೆ ಕ್ರೀಸ್‌ನಲ್ಲಿದ್ದ ಏಕೈಕ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಇಂಗ್ಲೆಂಡ್ ಬಹುಬೇಗ ಔಟ್ ಮಾಡಿತ್ತು. ನಂತರ, ಇಶಾಂತ್ ಶರ್ಮಾ ಕೂಡ ಪೆವಿಲಿಯನ್ ಸೇರಿದ್ದರು. ಆ ಮೂಲಕ ಭಾರತ 209 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಜೊತೆಯಾದ ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರಿತ್ ಬುಮ್ರಾ ಜೋಡಿ ಇಂಗ್ಲೆಂಡ್ ತಂಡ ಸೇರಿದಂತೆ ಹಲವು ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನು ತಲೆ ಕೆಳಗಾಗುವಂತೆ ಮಾಡಿತ್ತು. ಈ ಜೋಡಿ ಮುರಿಯದ 9ನೇ ವಿಕೆಟ್‌ಗೆ 89 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ 272 ರನ್ ಗುರಿ ನೀಡುವಲ್ಲಿ ಭಾರತಕ್ಕೆ ನೆರವಾಯಿತು. ಟೇಲೆಂಡರ್‌ಗಳ ವಿಕೆಟ್ ಪಡೆಯಲು ನಾಯಕ ಜೋ ರೂಟ್ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವರ ಪ್ರಯತ್ನ ಫಲ ನೀಡಲಿಲ್ಲ. ಬಳಿಕ ಗುರಿ ಹಿಂಬಾಲಿಸಿದ ಇಂಗ್ಲೆಂಡ್ 52 ಓವರ್‌ಗಳ ಒಳಗಾಗಿ ಕೇವಲ 120 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ 151 ರನ್‌ಗಳ ಹೀನಾಯ ಸೋಲಿನ ಮುಖಭಂಗ ಅನುಭವಿಸಿತ್ತು. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಆಶಷ್ ಟೆಸ್ಟ್ ಸರಣಿ ನಿಮಿತ್ತಾ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್, ಜೋ ರೂಟ್ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. "ಅವರು(ಜೋ ರೂಟ್) ಕಥಾವಸ್ತುವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ನಾಯಕನ ಪ್ರಮುಖ ಸಮಸ್ಯೆ ಏನೆಂದರೆ, ಪರಿಸ್ಥಿತಿಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ವಿಫಲವಾಗುತ್ತಿರುವುದು. ದೊಡ್ಡ ಎದುರಾಳಿ ತಂಡಗಳ ವಿರುದ್ಧ ಜೋ ರೂಟ್ ಸೂಕ್ತ ನಾಯಕನಲ್ಲ ಎಂಬ ಅಂಶವನ್ನು ಕೊನೆಗೂ ಕೆಲವರು ಅರಿತುಕೊಂಡಿದ್ದಾರೆ," ಎಂದು ಹೇಳಿದರು. "ಇದೀಗ ನೀವು ಏನು ಮಾಡುತ್ತೀರಿ? ಆಶಷ್ ಟೆಸ್ಟ್ ಸರಣಿಗೆ ನಾಯಕನನ್ನು ಬದಲಾವಣೆ ಮಾಡುತ್ತೀರಾ? ಇದು ಒಳ್ಳೆಯ ಉಪಾಯವಲ್ಲ. ಆದರೆ, ನಾಯಕನಾಗಿ ನೀವು ಅವರನ್ನೇ ಮುಂದುವರಿಸುವ ಮೂಲಕ ಗೆಲ್ಲುವ ಅವಕಾಶವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೀರಿ," ಎಂದು ಇಯಾನ್ ಚಾಪೆಲ್ ಎಚ್ಚರಿಕೆ ನೀಡಿದ್ದಾರೆ. 2017ರಲ್ಲಿ ಅಲ್‌ಸ್ಟೈರ್ ಕುಕ್ ಅವರಿಂದ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡ ಜೋ ರೂಟ್ ಇದುವರೆಗೂ 54 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 26 ಹಣಾಹಣಿಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಇನ್ನು, ಅವರ ಗೆಲುವಿನ ಸರಾಸರಿ 48.14 ರಷ್ಟಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ, ಆಗಸ್ಟ್ 25 ರಿಂದ ಲೀಡ್ಸ್‌ನಲ್ಲಿ ಭಾರತವನ್ನು ಎದುರಿಸಲಿದೆ. ಇದಕ್ಕೂ ಮುನ್ನ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದಿದ್ದ ಆರಂಭಿಕ ಟೆಸ್ಟ್ ಪಂದ್ಯದಲ್ಲಿಯೂ ಇಂಗ್ಲೆಂಡ್, ಭಾರತದ ಎದುರು ಸೋಲು ಅನುಭವಿಸಬೇಕಾಗಿತ್ತು. ಆದರೆ, ಐದನೇ ದಿನ ಮಳೆಯಾಗಿದ್ದರಿಂದ ಕೂದಲೆಳೆಯ ಅಂತರದಲ್ಲಿ ರೂಟ್ ಪಡೆ ಸೋಲಿನಿಂದ ಪಾರಾಗಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2VXteWZ