ಹೊಸದಿಲ್ಲಿ: ಕಳೆದ 1970ರ ದಶಕ ಭಾರತೀಯ ಕ್ರಿಕೆಟ್ ಪಾಲಿಗೆ ಸುವರ್ಣ ಯುಗವಾಗಿದೆ. ಬಲಿಷ್ಠ ವೆಸ್ಟ್ ಇಂಡೀಸ್ ಹಾಗೂ ವಿರುದ್ಧ ಅವರದೇ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಇದರಲ್ಲಿ 1971ರಂದು ಇದೇ ದಿನದಂದು ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಆಂಗ್ಲರ ನೆಲದಲ್ಲಿ ಭಾರತ ತಂಡದ ಚೊಚ್ಚಲ ಟೆಸ್ಟ್ ಸರಣಿ ಜಯ ಕೂಡ ಇದಾಗಿತ್ತು. ಐತಿಹಾಸಿಕ ಲಾರ್ಡ್ಸ್ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಆರಂಭಿಕ ಎರಡು ಪಂದ್ಯಗಳು ಡ್ರಾ ಆಗಿದ್ದವು. ಈ ಹಿನ್ನೆಲೆಯಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅದರಂತೆ ಕೆನ್ನಿಂಗ್ಟನ್ ಓವಲ್ ಮೈದಾನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡ, 4 ವಿಕೆಟ್‌ಗಳ ಐತಿಹಾಸಿಕ ಗೆಲುವು ಸಾಧಿಸಿ, ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು. ಕ್ರಿಕೆಟ್ ಜನಕರ ನಾಡಿನಲ್ಲಿ ಭಾರತಕ್ಕೆ ಒಲಿದ ಮೊದಲ ಟೆಸ್ಟ್ ಸರಣಿ ಗೆಲುವು ಇದಾಗಿತ್ತು. ಅಲ್ಲದೆ, 1968ರ ಬಳಿಕ 28 ಟೆಸ್ಟ್ ಪಂದ್ಯಗಳಾಡಿದ್ದ ಇಂಗ್ಲೆಂಡ್ ತಂಡಕ್ಕೆ ಇದು ಮೊಟ್ಟ ಮೊದಲ ಟೆಸ್ಟ್ ಪಂದ್ಯದ ಸೋಲಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 355 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ನಂತರ ಎರಡನೇ ದಿನದಾಟ ಮಳೆಗೆ ಆಹುತಿಯಾಗಿದ್ದರ ಹೊರತಾಗಿಯೂ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 284 ರನ್ ಗಳಿಸಿ ಆಲ್‌ಔಟ್ ಆಗಿತ್ತು. 71 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್‌ಗೆ ಸ್ಪಿನ್ ಮಾಂತ್ರಿಕ ಚಂದ್ರಶೇಖರ್ (38ಕ್ಕೆ 6) ಆಘಾತ ನೀಡಿದ್ದರು. ಆ ಮೂಲಕ ಇಂಗ್ಲೆಂಡ್ 101ಕ್ಕೆ ಕುಸಿಯಿತು. ಬಳಿಕ 173 ರನ್ ಗುರಿ ಹಿಂಬಾಲಿಸಿದ ಭಾರತ ತಂಡ, 5ನೇ ದಿನ ಹಗ್ಗ-ಜಗ್ಗಾಟದ ನಡುವೆಯೂ 4 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಭಾರತದ ಪರ ನಾಯಕ ಅಜಿತ್ ವಾಡೇಕರ್(204 ರನ್) ಗರಿಷ್ಠ ವೈಯಕ್ತಿಕ ಸ್ಕೋರರ್ ಎನಿಸಿಕೊಂಡಿದ್ದರು ಹಾಗೂ ವೆಂಕಟರಾಘವನ್ ಹಾಗೂ ಬಿ ಚಂದ್ರಶೇಖರ್ ತಲಾ 13 ವಿಕೆಟ್‌ಗಳನ್ನು ಪಡೆದು ಭಾರತದ ಪರ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್‌ಗಳೆನಿಸಿಕೊಂಡಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jcFgoB