ದೊಡ್ಡಬಳ್ಳಾಪುರ: ಸ್ಥಳೀಯ ಮಾಜಿ ನಗರ ಸಭಾಧ್ಯಕ್ಷರೊಬ್ಬರು ಮತ್ತು ಸ್ಥಳೀಯರು ಅವಮಾನಿಸಿದ್ದರಿಂದ 48 ವರ್ಷದ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾಸ್‌ಬಾಗ್‌ನಲ್ಲಿ ನಡೆದಿದೆ ಎನ್ನಲಾಗಿದೆ. ಅವಮಾನಕ್ಕೆ ಬೇಸತ್ತು ರಾತ್ರಿ ಇಡೀ ದೊಡ್ಡಬಳ್ಳಾಪುರದಿಂದ ಬೆಂಗಳೂರಿನ ಹೆಸರುಘಟ್ಟಕ್ಕೆ ನಡೆದು ಹೋಗಿ ಅಲ್ಲಿನ ಕೆರೆಯ ಪಕ್ಕದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಸತ್ಯಾಂಶ ಹೊರಬರಬೇಕಿದೆ. ಕೋವಿಡ್19 ಸೋಂಕು ತಗುಲಿದ್ದ ಕುಟುಂಬಕ್ಕೆ ಬೇರೆ ಕಡೆ ಹೋಗಿ ವಾಸಿಸುವಂತೆ ಜನಪ್ರತಿನಿಧಿ ದರ್ಪ ತೋರಿದ್ದರಿಂದ ನೇಣಿಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ಆರೋಪಿಸಿವೆ. ಸೋಂಕಿತನ ಮಗ ಬೆಂಗಳೂರಿನಲ್ಲಿ ವಾಸವಿದ್ದ!ಬೆಂಗಳೂರಿನಲ್ಲಿದ್ದ ಪುತ್ರನ ಆರೋಗ್ಯ ಕೈ ಕೊಟ್ಟಿತ್ತು. ಮಗನನ್ನು ನೋಡಿಕೊಳ್ಳಲು ಬೆಂಗಳೂರಿಗೆ ಬಂದಿದ್ದ. ಸೋಂಕಿತನ ಪತ್ನಿಗೂ ಸೋಂಕು ತಗಲಿತ್ತು. ಪತ್ನಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಬಳಿಕ ಸೋಂಕಿತನ ಇನ್ನೊಬ್ಬ ಪುತ್ರನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಸೋಂಕಿತ ವ್ಯಕ್ತಿ ದೊಡ್ಡಬಳ್ಳಾಪುರ ನಗರದ ಸರಕಾರಿ ಆಸ್ಪತ್ರೆಯಲ್ಲಿ ಒಂದು ವಾರಗಳ ಚಿಕಿತ್ಸೆ ಪಡೆದುಕೊಂಡು ಮನೆ ಬಂದಾಗ ಮನೆಯನ್ನು ಸೀಲ್‌ಡೌನ್ ಮಾಡಲಾಗಿತ್ತು. ಈ ಬಗ್ಗೆ ಅಕ್ಕಪಕ್ಕದ ಮನೆಯವರು ಹೀಯಾಳಿಸಿ ಅವಮಾನ ಮಾಡಿದ್ದರು. 'ನಿಮ್ಮಿಂದ ನಮಗೆಲ್ಲಾ ಸಮಸ್ಯೆಯಾಯಿತು' ಎಂದು ಮೂದಲಿಸಿದ್ದರು. ಸಾಯುವ ಮುನ್ನ ಮೃತರು ಮಗಳಿಗೆ ಕರೆ ಮಾಡಿ ತನಗೆ ಆದ ನೋವನ್ನು ತಿಳಿಸಿದ್ದಾರೆ. ''ಬುದ್ಧಿ ಮಾತು ಹೇಳಿದ್ದೇವೆ ಅಷ್ಟೇ, ಯಾರು ಮನೆಯಿಂದ ಹೊರ ಬರಬೇಡಿ ಅಂತಾ ಅಷ್ಟೇ.. ಅವರನ್ನು ನಾವು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಲ್ಲ,'' ಎಂದು ನಗರಸಭಾ ಮಾಜಿ ಅಧ್ಯಕ್ಷ ಮುದ್ದಪ್ಪ ಸ್ಪಷ್ಟನೆ ನೀಡಿದ್ದಾರೆ.
from India & World News in Kannada | VK Polls https://ift.tt/3fQAYz8