
ಬೆಂಗಳೂರು: ಆತ ಉತ್ತಮ ಗಣಿತ ತಜ್ಞ, 15 ವರ್ಷ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಬೇರೆ ಇತ್ತು. ಆದರೆ ಕುಡಿತ ಎಂಬ ದುಶ್ಚಟವೊಂದು ಆತನನ್ನು ತನ್ನ ಮಗಳಿಂದಲೇ ಹತ್ಯೆಯಾಗುವಂತೆ ಮಾಡಿದ್ದು ಮಾತ್ರ ವಿಪರ್ಯಾಸ. ಹೌದು, ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ 15 ವರ್ಷದ ಮಗಳಿಂದಲೇ ಹತ್ಯೆಗೀಡಾದ ತಂದೆಯೋರ್ವನ ದುರಂತ ಕತೆ ಇದು. ಗಣಿತದಲ್ಲಿ ಪಾಂಡಿತ್ಯ ಗಳಿಸಿದ್ದ ಪ.ಬಂಗಾಳ ಮೂಲದ ಸಪ್ತಕ್ ಬ್ಯಾನರ್ಜಿ, ಐಟಿ ಕಂಪನಿಯೊಂದರಲ್ಲಿ 15 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದರು. ಆದರೆ ಕುಡಿತದ ಚಟದಿಂದಾಗಿ ಕೆಲಸ ಬಿಟ್ಟು ನಿರುದ್ಯೋಗಿ ಆದ ಬ್ಯಾನರ್ಜಿ, ನಿತ್ಯ ರಾತ್ರಿ ಮನೆಗೆ ಕುಡಿದು ಬಂದು ಹೆಂಡತಿ ಮಕ್ಕಳೊಂದಿಗೆ ಗಲಾಟೆ ಮಾಡುತ್ತಿದ್ದರು. ಕೊಲೆಗೀಡಾಗುವ ದಿನವೂ ಹೀಗೆಯೇ ಮಗಳೊಂದಿಗೆ ಬ್ಯಾನರ್ಜಿ ಗಲಾಟೆ ಮಾಡಿಕೊಂಡಿದ್ದರು. ಕಳೆದ ಜುಲೈ22(ಬುಧವಾರ) ರಂದು ರಾತ್ರಿ ಕುಡಿದು ಮನೆಗೆ ಬಂದ ಸಪ್ತಕ್ ಬ್ಯಾನರ್ಜಿ, ಜೋರಾಗಿ ತಮ್ಮ ಪಿಯಾನೋ ಬಾರಿಸಲು ಆರಂಭಿಸಿದ್ದಾರೆ. ಈ ವೆಳೆ ಓದಿಕೊಳ್ಳುತ್ತಿದ್ದ 15 ವರ್ದ ಮಗಳು ಶಬ್ಧ ಮಾಡದಂತೆ ತಂದೆಯಲ್ಲಿ ಮನವಿ ಮಾಡಿದ್ದಾಳೆ. ಆದರೆ ಮಗಳ ಮನವಿಗೆ ಸೊಪ್ಪು ಹಾಕದ ಬ್ಯಾನರ್ಜಿ ಮತ್ತಷ್ಟು ಜೋರಾಗಿ ಪಿಯಾನೋ ಬಾರಿಸಲು ಆರಂಭಿಸಿದ್ದಾರೆ. ಇದರಿಂದ ಕಿರಿಕಿರಿ ಅನುಭವಿಸಿದ ನೆರೆ ಹೊರೆಯವರು ಶಬ್ಧ ಮಾಡದಂತೆ ಬ್ಯಾನರ್ಜಿಗೆ ತಾಕೀತು ಮಾಡಿದ್ದಾರೆ. ಹೀಗಾಗಿ ತಾನೇ ಪಿಯಾನೋ ಶಬ್ಧ ಕಡಿಮೆ ಮಾಡಲು ಮಗಳು ಮುಂದಾದಾಗ ಸಿಟ್ಟಾದ ಬ್ಯಾನರ್ಜಿ, ಚಾಕುವಿನಿಂದ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಾಯಗೊಂಡ ಮಗಳು, ಆತ್ಮ ರಕ್ಷಣೆಗಾಗಿ ಎತ್ತಿಕೊಂಡು ತಂದೆಯ ಎದೆಗೆ ಚುಚ್ಚಿದ್ದಾಳೆ. ಬ್ಯಾನರ್ಜಿ ಪತ್ನಿ ತಮ್ಮ ಎರಡನೆ ಮಗುವಿಗೆ ಜನ್ಮ ನೀಡಿದ 10 ದಿನಗಳಲ್ಲೇ ಅಸುನೀಗಿದ್ದರು. ಇದರಿಂದ ತೀವ್ರ ಖಿನ್ನತೆಗೆ ಗುರಿಯಾಗಿದ್ದ ಬ್ಯಾನರ್ಜಿ, ಕುಡಿತದ ದಾಸರಾಗಿದ್ದರು. ಆದರೆ ಇದರಿಂದ ಮನೆಯವರಿಗೆ ಆಗುತ್ತಿದ್ದ ತೊಂದರೆಯನ್ನು ಬ್ಯಾನರ್ಜಿ ನಿರ್ಲಕ್ಷ್ಯ ಮಾಡುತ್ತಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಕುಡಿತದ ಚಟವೊಂದು ಚೆಂದದ ಸಂಸಾರವನ್ನು ಹಾಳು ಮಾಡಿದ್ದು, ಕುಡಿತ ತಂದೊಡ್ಡಬಹುದಾದ ಭೀಕರ ಆಪತ್ತುಗಳನ್ನು ಈ ಪ್ರಕರಣ ಎತ್ತಿ ತೋರಿಸಿದೆ ಎಂದು ಹೇಳಬಹುದು.
from India & World News in Kannada | VK Polls https://ift.tt/39tWdEF