ದಿನಗಟ್ಟಲೆ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆಯುತ್ತಿರುವ ಇತರ ರೋಗಿಗಳ ಜೀವ ಉಳಿಸಿ

ಗಿರೀಶ್‌ ಕೋಟೆ ಬೆಂಗಳೂರುಉಸಿರಾಟದ ತೊಂದರೆ, ಹೃದ್ರೋಗ ಸಮಸ್ಯೆ, ಹೆರಿಗೆ ನೋವಿನಿಂದ ಬಳಲುತ್ತಿರುವ ವ್ಯಕ್ತಿಗೆ ಪ್ರತಿ ಕ್ಷಣವೂ ಅಮೂಲ್ಯ. ಒಂದು ಕ್ಷಣವೂ ತಡ ಮಾಡದೆ ಅವರನ್ನು ಆಸ್ಪತ್ರೆಗೆ ಕರೆತರಬೇಕು ಇತ್ತೀಚಿನವರೆಗೂ ವೈದ್ಯ ಜಗತ್ತು ಈ ಮಾತನ್ನು ಮಂತ್ರದಂತೆ ಪಠಿಸುತ್ತಿತ್ತು. ಆದರೆ ಈಗ ಕೊರೊನಾ ರೋಗಿಗಳಷ್ಟೇ ಅಲ್ಲ, ಇತರ ರೋಗಿಗಳೂ ಗಂಟೆಗಟ್ಟಲೆ, ದಿನಗಟ್ಟಲೆ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆಯುತ್ತ ಚಿಕಿತ್ಸೆ ಸಿಗದೆ ಜೀವ ಬಿಡುತ್ತಿದ್ದಾರೆ. ಕೋವಿಡ್‌ ಸೋಂಕಿನ ಉಸಾಬರಿಯೇ ಬೇಡ ಎಂದು ಬಹುತೇಕ ಆಸ್ಪತ್ರೆಗಳು ಕೊರೊನೇತರ ರೋಗಿಗಳನ್ನೂ ದೂರ ಇಡುತ್ತಿದ್ದಾರೆ.ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸರಕಾರಿ ಆಸ್ಪತ್ರೆಗಳನ್ನು ಮಾತ್ರವಲ್ಲಖಾಸಗಿ ಆಸ್ಪತ್ರೆಗಳನ್ನೂ ಚಿಕಿತ್ಸೆಗೆ ಬಳಸಿಕೊಳ್ಳಲಾಯಿತು. ಆದರೆ ಕೊರೊನಾ ಅಬ್ಬರದ ನಡುವೆ ಇತರ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಹಾಗಾಗಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ದಾರುಣವಾಗಿ ಸಾಯುವ ಪ್ರಕರಣಗಳು ಹೆಚ್ಚುತ್ತಿವೆ.ವಿಶ್ವದ ಮೂಲೆ ಮೂಲೆಗಳಿಂದ ನಾನಾ ಚಿಕಿತ್ಸೆಗಳಿಗಾಗಿ ರೋಗಿಗಳನ್ನು ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನ ವೈದ್ಯ ಜಗತ್ತಿನ ಹೆಗ್ಗಳಿಕೆಯಂತೂ ಕೊರೊನಾ ಕಾಲದಲ್ಲಿ ಮಂಕು ಕವಿದಿದೆ. ರಾಜ್ಯದ ಇತರ ಭಾಗಗಳ ಆಸ್ಪತ್ರೆಗಳು ಕೂಡ ಇದೇ ರೀತಿ ನಿರ್ಧಯವಾಗಿ ನಡೆಸಿಕೊಳ್ಳುತ್ತಿವೆ. ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ಗಗನ ಕುಸುಮ ಆಗಿರುವುದು ಒಂದು ಕಡೆಗಾದರೆ, ಮತ್ತೊಂದು ಕಡೆ ಕೊರೊನಾ ಇಲ್ಲದ ರೋಗಿಗಳೂ ಸಕಾಲದಲ್ಲಿಚಿಕಿತ್ಸೆ ಸಿಗದೆ ಪ್ರಾಣ ಬಿಡುತ್ತಿದ್ದಾರೆ. ಏನೇ ಆರೋಗ್ಯ ಸಮಸ್ಯೆ ಆಗಿದ್ದರೂ ಕೊರೊನಾ ಪರೀಕ್ಷೆಯ ವರದಿ ಇಲ್ಲದೆ ಆಸ್ಪತ್ರೆಯೊಳಗೆ ಕಾಲಿಡಬೇಡಿ ಎನ್ನುವ ನಿರ್ದಯ ವರ್ತನೆ ವರದಿಯಾಗುತ್ತಿವೆ. ತಡರಾತ್ರಿಯಲ್ಲಿ ಏಕಾಏಕಿ ಆರೋಗ್ಯ ಸಮಸ್ಯೆ ಆದವರು ಕೊರೊನಾ ಪರೀಕ್ಷೆಗೆ ಎಲ್ಲಿಗೆ ಹೋಗಬೇಕು? ವರದಿ ಬರಲು 3ರಿಂದ 5 ದಿನಗಳಾದರೂ ಬೇಕು. ಅಲ್ಲಿಯವರೆಗೆ ತುರ್ತು ಅಗತ್ಯದ ರೋಗಿಗಳು ಎಲ್ಲಿಗೆ ಹೋಗಬೇಕು? ವರದಿ ಬರುವವರೆಗೂ ಜೀವ ಕಾಯುತ್ತದೆಯೇ ಎನ್ನುವ ಪ್ರಶ್ನೆಗಳಿಗೆ 'ಸಾವೇ' ಉತ್ತರವಾಗಿದೆ.ಆಡುವಾಗ ಬಿದ್ದು ನಾಲಗೆ ತುಂಡರಿಸಿಕೊಂಡ ಬಾಲಕ, ದಿನ ತುಂಬಿದ ಗರ್ಭಿಣಿಯ ಹೆರಿಗೆ ನೋವು, ಫುಡ್‌ ಪಾಯ್ಸನ್‌ನಿಂದ ಸಮಸ್ಯೆಗೆ ಸಿಕ್ಕಿಕೊಂಡವರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡೇ ಬರಬೇಕು, ಇಲ್ಲದಿದ್ದರೆ ಸಾಯಬೇಕು ಎನ್ನುವ ಕಠೋರ ವ್ಯವಸ್ಥೆ ಸೃಷ್ಟಿಯಾಗಿದೆ. ಸರಕಾರ, ಸಿಎಂ, ಸಚಿವರ ಹತ್ತಾರು 'ಅಂತಿಮ ಎಚ್ಚರಿಕೆ'ಗಳ ಬಳಿಕವೂ ಪರಿಸ್ಥಿತಿ ಸುಧಾರಿಸಿಲ್ಲ. ತುರ್ತು ಚಿಕಿತ್ಸೆಗಾಗಿ 8, 10, 15 ಆಸ್ಪತ್ರೆಗಳಿಗೆ ಅಲೆದು ನಡು ರಸ್ತೆಯಲ್ಲಿ ಜೀವ ಕಳೆದುಕೊಳ್ಳುವಂತಾಗಿದೆ.

ಆಸ್ಪತ್ರೆ ಬಾಗಿಲಿಗೆ ಬರುವ ಪ್ರತಿ ರೋಗಿಗೂ ಕೊರೊನಾ ಪರೀಕ್ಷೆ ಆಗಬೇಕು ಎನ್ನುವುದರ ಹಿಂದೆಯೂ ಲೆಕ್ಕಾಚಾರ ಇದೆ. 'ಕೊರೊನಾ ವರದಿ ಬರುವವರೆಗೂ ಪ್ರತಿ ದಿನದ ಬೆಡ್‌ ಶುಲ್ಕ 30 ಸಾವಿರ ಇದೆ. ವರದಿ ಪಾಸಿಟಿವ್‌/ನೆಗೆಟಿವ್‌ ಏನೇ ಬಂದರೂ ಈ ಹಣ ಕಡ್ಡಾಯವಾಗಿ ಕಟ್ಟಬೇಕು. ಅಲ್ಲಿಯವರೆಗೂ ಬೆಡ್‌ ಮಾತ್ರ ಸಿಗುತ್ತದೆ. ಚಿಕಿತ್ಸೆ ಇಲ್ಲ. 'ವರದಿ ಬಂದ ಬಳಿಕ ಚಿಕಿತ್ಸೆ ಶುರು ಮಾಡ್ತೇವೆ. 5 ಲಕ್ಷ ಮೊದಲೇ ಕಟ್ಟಿದರೆ ಮಾತ್ರ ದಾಖಲಿಸಿಕೊಳ್ಳುತ್ತೇವೆ' ಎಂದು ಕೆಲವು ಆಸ್ಪತ್ರೆಗಳು ಹೇಳುತ್ತಿವೆ.

ಹೈಕೋರ್ಟ್‌ ಚಾಟಿ ಬಳಿಕವೂ:

ಸರಕಾರದ ಸರಣಿ ಕೊನೆಯ ಎಚ್ಚರಿಕೆಗಳಿಗೂ ಆಸ್ಪತ್ರೆಗಳು ಮಣಿಯದಿದ್ದಾಗ ಹೈಕೋರ್ಟ್‌ ಚಾಟಿ ಬೀಸಿತು. ನಿಯಮ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯಿದೆ ಅಡಿಯಲ್ಲಿಪ್ರಕರಣ ದಾಖಲಿಸುವಂತೆ ಸೂಚಿಸಿತು. ಇದುವರೆಗೆ ಯಾವ ಆಸ್ಪತ್ರೆ ವಿರುದ್ಧವೂ ಸರಕಾರ ಈ ಕಾಯಿದೆ ಅಡಿ ಪ್ರಕರಣ ದಾಖಲಿಸಿಲ್ಲ.


ಸರಕಾರದ ಎಚ್ಚರಿಕೆ

:

* ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್‌ ಮಾಡಲಾಗುವುದು.

* ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

* ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸಲಾಗುವುದು.

* 11 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಯಿತು. ಇದರ ಹೊರತಾಗಿ ನೋಟಿಸ್‌ ಪಡೆದ ಆಸ್ಪತ್ರೆಗಳ ವಿರುದ್ಧ ಯಾವುದೇ ಕ್ರಮ ಆಗಲಿಲ್ಲ.

* ಕೊರೊನಾ ತಪಾಸಣೆಗೆ ನಿಗದಿಗಿಂತ ಹೆಚ್ಚು ಹಣ ಪಡೆದ 2 ಲ್ಯಾಬ್‌ಗಳಿಗೆ ನೋಟಿಸ್‌ ನೀಡಲಾಯಿತು. ಕ್ರಮ ಆಗಲಿಲ್ಲ. ಕೆಲವು ಖಾಸಗಿ ಲ್ಯಾಬ್‌ಗಳು 4,500 ಬದಲಿಗೆ 6 ಸಾವಿರಕ್ಕಿಂತ ಹೆಚ್ಚು ಹಣ ಪಡೆಯುತ್ತಿವೆ.

* ಎರಡು ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಯಿತು. ಬಳಿಕ ಆಸ್ಪತ್ರೆಗಳು ತಪ್ಪು ತಿದ್ದಿಕೊಂಡಿದ್ದಾಗಿ ಹೇಳಿಕೆ ನೀಡಿದವು ಅಷ್ಟೆ.



from India & World News in Kannada | VK Polls https://ift.tt/39gBqnT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...