ಇಸ್ಲಾಮಾಬಾದ್: ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪ್ರಧಾನಿ ಶೇಖ್ ಹಸೀನಾ ನಡುವೆ ದೂರವಾಣಿ ಮಾತುಕತೆ ನಡೆದಿದ್ದು, ಈ ವೇಳೆ ಉಭಯ ನಾಯಕರು ಮಾತನಾಡಿರುವುದು ಭಾರತದ ಕಣ್ಣು ಕೆಂಪಾಗಿಸಿದೆ. ಆಕ್ರಮಣಕಾರಿ ನೀತಿಯಿಂದಾಗಿ ನೆರೆ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧದ ಮೇಲೆ ದುಷ್ಪರಿಣಾಮ ಬೀರಿದ್ದು, ಇದಕ್ಕೆ ಚೀನಾದೊಂದಿಗೆ ನಡೆದ ಗಡಿ ಘರ್ಷಣೆಯೇ ತಾಜಾ ಉದಾಹರಣೆ ಎಂದು ಇಮ್ರಾನ್ ಖಾನ್ ಈ ವೇಳೆ ಹೇಳಿದ್ದಾರೆ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಢಲಾಗಿದ್ದ ವಿಶೇಷ ಸ್ಥಾನಮಾನ ರದ್ದಗೊಳಿಸಿದ ಭಾರತ, ಅಲ್ಲಿನ ಜನತೆಯ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಶೇಖ್ ಹಸೀನಾ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಭಾರತ ಸದ್ಯ ಚೀನಾ, ನೇಪಾಳ ಮತ್ತು ಪಾಕಿಸ್ತಾನದೊಂದಿಗೆ ಸಂಬಂಧ ಹಳಸಿಕೊಂಡಿದ್ದು, ಇದಕ್ಕೆಲ್ಲಾ ಭಾರತದ ಆಕ್ರಮಣಕಾರಿ ವಿದೇಶಾಂಗ ನೀತಿ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನೆರೆಯ ರಾಷ್ಟ್ರಗಳ ಮೇಲೂ ಪರಿಣಾಮ ಬೀರಿದ್ದು, ಭಾರತ-ಚೀನಾ ಗಡಿ ಘರ್ಷಣೆ ಹಾಗೂ ನೇಪಾಲ ಗಡಿ ನಕ್ಷೆ ವಿವಾದ ಇದಕ್ಕೆ ಪುಷ್ಠಿ ಎಂಬುದು ಇಮ್ರಾನ್ ಆರೋಪವಾಗಿದೆ. ಆದರೆ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಬಾಂಗ್ಲಾದೇಶ ಮಾತ್ರ ಉಭಯ ನಾಯಕರ ನಡುವೆ ನಡೆದ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿಲ್ಲ. ಕೇವಲ ಇಮ್ರಾನ್ ಖಾನ್ ಅವರೊಂದಿಗೆ ಕೊರೊನಾ ವೈರಸ್ ಹಾವಳಿ, ಪ್ರವಾಹದ ಕುರಿತು ಶೇಖ್ ಹಸೀನಾ ಚರ್ಚೆ ನಡೆಸಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಪಾಕಿಸ್ತಾನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಭಯ ನಾಯಕರು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದಲ್ಲದೇ, ಶಾಂತಿ ಸ್ಥಾಪನೆ ಮುಖ್ಯ ಎಂಬ ಜಂಟಿ ನಿಲುವು ಪ್ರಕಟಿಸಿದರು ಎಂದು ಹೇಳಲಾಗಿದೆ. ಈ ಮಧ್ಯೆ ಇಮ್ರಾನ್ ಖಾನ್ ಹಾಗೂ ಶೇಖ್ ಹಸೀನಾ ನಡುವೆ ಕಾಶ್ಮೀರ ವಿಚಾರ ಪ್ರಸ್ತಾಪವಾಗಿದೆ ಎಂಬ ವರದಿಗೆ ಭಾರತ ಕಟುವಾಗಿ ಪ್ರತಿಕ್ರಿಯಿಸಿದೆ. ಭಾರತದ ಆಂತರಿಕ ವಿಚಾರವನ್ನು ಪಾಕ್ ಹಾಗೂ ಬಾಂಗ್ಲಾ ಪ್ರಧಾನಿಗಳು ಮಾತನಾಡಿ ಸಮಯ ವ್ಯರ್ಥ ಮಾಡುವುದು ಬೇಕಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್ ಕುಹುಕವಾಡಿದ್ದಾರೆ. ಕಾಶ್ಮೀರ ಸಂಗತಿ ಭಾರತದ ಆಂತರಿಕ ವಿಚಾರವಾಗಿದ್ದು, ಈ ವಿಚಾರವನ್ನು ಪಾಕ್ ಹಾಗೂ ಬಾಂಗ್ಲಾ ಪ್ರಧಾನಿ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದಿರುವ ಭಾರತ, ಸಾರ್ವಭೌಮತೆಗೆ ಧಕ್ಕೆ ಬಂದರೆ ಸೂಕ್ತ ತಿರುಗೇಟು ನಿಡುವುದಾಗಿ ಎಚ್ವರಿಸಿದೆ. ಒಟ್ಟಿನಲ್ಲಿ ಇಮ್ರಾನ್ ಖಾನ್ ಹಾಗೂ ಶೇಖ್ ಹಸೀನಾ ನಡುವೆ ಕಾಶ್ಮೀರ ವಿಚಾರ ಪ್ರಸ್ತಾಪವಾಗಿದೆ ಎಂಬ ವರದಿ ಚರ್ಚೆಗೆ ಕಾರಣವಾಗಿದ್ದು, ಭಾರತದ ತೀಕ್ಷ್ಣ ಪ್ರತಿಕ್ರಿಯೆ ಗಮನ ಸೆಳೆದಿದೆ.
from India & World News in Kannada | VK Polls https://ift.tt/2OV3vYq