ಜೈಪುರ್: ಬಣದ ವಿರುದ್ಧದ ಅನರ್ಹತೆ ನೋಟಿಸ್ಗೆ ಸಂಬಂಧಿಸಿದ ತೀರ್ಪು ಪ್ರಕಟಿಸಿದಂತೆ ರಾಜಸ್ಥಾನ ಹೈಕೋರ್ಟ್ಗೆ ಆದೇಶ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ವಿಧಾನಸಭೆ ಸ್ಪೀಕರ್ ಸಿಪಿ ಜೋಷಿ ಇದೀಗ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಬಂಡಾಯಗಾರ ಸಚಿನ್ ಪೈಲಟ್ ಮತ್ತು ಅವರ 18 ಬೆಂಬಲಿಗ ಶಾಸಕರ ವಿರುದ್ಧ ಸ್ಪೀಕರ್ ಅನರ್ಹತೆ ನೋಟಿಸ್ ಜಾರಿ ಮಾಡಿದ್ದರು. ಇದರ ವಿರುದ್ಧ ಪೈಲಟ್ ಬಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಮಧ್ಯೆ ಅನರ್ಹತೆ ಅರ್ಜಿಯ ತೀರ್ಪನ್ನು ಪ್ರಕಟಿಸದಂತೆ ರಾಜಸ್ಥಾನ ಹೈಕೋರ್ಟ್ಗೆ ಆದೇಶ ನೀಡಬೇಕೆಂದು ಕೋರಿ ಸ್ಪೀಕರ್ ಸಿಪಿ ಜೋಷಿ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ಗೆ ಅಂತಹ ಯಾವುದೇ ಆದೇಶ ನೀಡುವುದಿಲ್ಲ ಎಂದು ಸುಪ್ರೀಕೋರ್ಟ್ ಸ್ಪಷ್ಟಪಡಿಸಿದ್ದಲ್ಲದೇ, ಅರ್ಜಿಯ ವಿಚಾರಣೆಯನ್ನು ಇಂದಿಗೆ(ಸೋಮವಾರ) ಮುಂದೂಡಿತ್ತು. ಆದರೆ ಈ ಅರ್ಜಿಯನ್ನು ಹಿಂಪಡೆದಿರುವ ಸಿಪಿ ಜೋಷಿ, ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡುವುದಾಗಿ ಹೇಳಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಬೇಕು ಎಂಬ ಕಾಂಗ್ರೆಸ್ನ ಒಂದು ಬಣದ ವಾದಕ್ಕೆ ಜಯ ಸಿಕ್ಕಂತಾಗಿದೆ. ಒಟ್ಟಿನಲ್ಲಿ ಕ್ಷಣಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸದ್ಯ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವ ಮೂಲಕ ಒಂದು ವಿವಾದಕ್ಕೆ ತೆರೆ ಎಳೆಯಲಾಗಿದೆ.
from India & World News in Kannada | VK Polls https://ift.tt/2CQ8ffx