
ಆಗುಂಬೆ: ಜಗತ್ತಿನ 18 ಅಪರೂಪದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಪರಿಸರದಲ್ಲಿ ಪಾರಂಪರಿಕ ಸ್ಥಳೀಯ ಜಾತಿಯ ಸಸಿಗಳನ್ನು ಬೆಳೆಸುತ್ತಿರುವ ಅರಣ್ಯ ಇಲಾಖೆ ಅವುಗಳ ರಕ್ಷಣೆಗಾಗಿ 'ಅಪಾಯಕಾರಿ ವಿಧಾನ'ಕ್ಕೆ ಶರಣಾಗಿ ಸರ್ವತ್ರ ಟೀಕೆಗೆ ಗುರಿಯಾಗಿದೆ. ಆಗುಂಬೆ ವಲಯಾರಣ್ಯ ವ್ಯಾಪ್ತಿಯ ಕಾರೇಕುಂಬ್ರಿ, ಕೊಡಿಗೆಮನೆ, ಮತ್ತಿಮನೆ, ಅಗಸರ ಕೋಣೆ ಮುಂತಾದ ಹಳ್ಳಿಗಳಲ್ಲಿ ಬೆತ್ತದ ಸಸಿ ಬೆಳೆಸುತ್ತಿರುವ ಅರಣ್ಯ ಇಲಾಖೆ ಇವುಗಳನ್ನು ಮುಳ್ಳು ಹಂದಿ ಹಾಗೂ ಇತರ ವನ್ಯಜೀವಿಗಳಿಂದ ರಕ್ಷಿಸಲು ಕಾರ್ಕೋಟಕ ವಿಷದ ತುಂಬಿದ ಚೀಲವನ್ನು ಬೆತ್ತದ ಸಸಿ ಬುಡದಲ್ಲಿ ಕಟ್ಟಿದೆ! ವಿಷದ ಟಿಮೆಟ್ ಪುಡಿಯ ವಾಸನೆ ಅಪರೂಪದ ಕಾಡು ಪ್ರಾಣಿಗಳ ಜೀವ ಸಂಕುಲಕ್ಕೆ ಕುತ್ತು ತರುವಂತಿದೆ. ಕುಡಿಯುವ ನೀರಿನ ಬಾವಿ, ಹಳ್ಳಕ್ಕೆ ತೇಲಿ ಬಂದಿರುವ ಟಿಮೆಟ್ ಪುಡಿಯ ವಿಷದ ಸುಳಿಗೆ ಸಿಕ್ಕ ಮೀನು, ಕಪ್ಪೆ ಇತರೆ ಜಲಚರ ಸಂತತಿಗಳು ಜೀವ ಕಳೆದುಕೊಂಡಿರುವ ಶಂಕೆ ಇದೆ. ಟಿಮೆಟ್ ಪುಡಿ ಚೀಲ ಇಟ್ಟು ಕಾಡು ಪ್ರಾಣಿಗಳಿಂದ ಬೆತ್ತದ ಸಸಿಗಳನ್ನು ಸಂರಕ್ಷಣೆ ಮಾಡುವ ಇಲಾಖೆಯ ಹೊಸ ಮಾದರಿ ಯೋಚನೆ ಇದೀಗ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಸಂರಕ್ಷಣೆ ನಿಯಮ ಉಲ್ಲಂಘನೆ!ಆಗುಂಬೆ ವಲಯಾರಣ್ಯ ವ್ಯಾಪ್ತಿಯಲ್ಲಿ ನೈಸರ್ಗಿಕ ಅರಣ್ಯ ಸಸಿಗಳನ್ನು ಬೆಳೆಸುವ ಕಾರ‍್ಯಕ್ರಮಕ್ಕೆ 6 ವರ್ಷದಿಂದ ಹೆಚ್ಚು ಒತ್ತು ನೀಡಲಾಗಿದೆ. ಆಗುಂಬೆ ಫಾರೆಸ್ಟ್ ಗೇಟ್ ಹತ್ತಿರದ ಬರ್ಕಣ ಫಾಲ್ಸ್ ಅರಣ್ಯ ಪ್ರದೇಶದಲ್ಲಿಇಲಾಖೆ ಅಪರೂಪದ ಔಷಧ ಸಸ್ಯಗಳ ಔಷಧವನ ನಿರ್ಮಿಸಿದೆ. ಎನ್‌ಎಂಪಿಬಿ ಯೋಜನೆಯಡಿ ಕುಂದಾದ್ರಿ ಪ್ರದೇಶದಲ್ಲಿ 37.5 ಹೆಕ್ಟೇರ್ ಪ್ರದೇಶದಲ್ಲಿಔಷಧ ಸಸ್ಯಗಳ ನೆಡುತೋಪು ನಿರ್ಮಾಣ ಮಾಡಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಕಾಡು ಪ್ರಾಣಿ ಹಾವಳಿ ತಡೆಗೆ ಪರಿಸರದ ಮೇಲೆ ಬಾರಿ ದುಷ್ಟಪರಿಣಾಮ ಬೀರುವ ಟಿಮೆಟ್‌ನಂತಹ ವಿಷ ಬಳಕೆ ಕ್ರಮ ಪರಿಸರ ಸಂರಕ್ಷಣೆ ನಿಯಮ ಸ್ಪಷ್ಟ ಉಲ್ಲಂಘನೆಯಂತಿದೆ.
from India & World News in Kannada | VK Polls https://ift.tt/2P07T8E