ಅಗರ್ತಲಾ: ಸರಕಾರಿ ನೌಕರರೂ ರಾಜಕೀಯ ರ‍್ಯಾಲಿಗಳಲ್ಲಿ ಭಾಗವಹಿಸಬಹುದು ಎಂದು ತ್ರಿಪುರ ಮಹತ್ವದ ತೀರ್ಪು ನೀಡಿದೆ. ''ಸರಕಾರಿ ನೌಕರರು ತಮ್ಮ ರಾಜಕೀಯ ನಿಲುವುಗಳನ್ನು ಹೊಂದಬಹುದು. ಆದರೆ ಅದು ಸೇವಾ ನಿಯಮಗಳ ಚೌಕಟ್ಟು ಮೀರಬಾರದು. ಸೇವಾ ನಿಯಮಗಳ ಹೆಸರಿನಲ್ಲಿ ರಾಜಕೀಯ ನಿಲುವು ಹೊಂದುವುದನ್ನು ತಡೆಯುವುದು ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ,'' ಎಂದು ಮುಖ್ಯ ನ್ಯಾಯಮೂರ್ತಿ ಅಖಿಲ್ ಖುರೇಶಿ ಹೇಳಿದ್ದಾರೆ. ಸರಕಾರಿ ನೌಕರರ ಸೇವಾ ನಿಯಮಾವಳಿಗಳ ನಿಯಮ 5(1)ರ ಪ್ರಕಾರ, ಸರಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು ಅಥವಾ ರಾಜಕೀಯ ಪಕ್ಷದ ಜತೆ ನಂಟು ಹೊಂದಿರುವ ಸಂಘಟನೆಗಳ ಸದಸ್ಯರಾಗಬಾರದು. ನಿಯಮ 5(4) ಅನ್ವಯ, ಸರಕಾರಿ ನೌಕರರು ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡಬಾರದು ಹಾಗೂ ಯಾವುದೇ ಚುನಾವಣೆಯಲ್ಲಿ ಯಾವುದೇ ವ್ಯಕ್ತಿ ಪರವಾಗಿ ರಾಜಕೀಯ ಪ್ರಭಾವ ಬೀರಬಾರದು. ರಾಜಕೀಯ ಪಕ್ಷವೊಂದರ ರ‍್ಯಾಲಿಯಲ್ಲಿ ಭಾಗವಹಿಸಿದ್ದು ಹಾಗೂ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದನ್ನು ನೆಪವಾಗಿಟ್ಟುಕೊಂಡು ಈ ನಿಯಮಗಳ ಉಲ್ಲಂಘನೆ ಆರೋಪ ಹೊರಿಸಿ ಮೀನುಗಾರಿಕೆ ಇಲಾಖೆ ಉದ್ಯೋಗಿ ಲಿಪಿಕಾ ಪಾಲ್ ಅವರನ್ನು ನಿವೃತ್ತಿಗೆ ನಾಲ್ಕು ದಿನ ಇರುವಾಗ ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಮೊರೆ ಹೋಗಿದ್ದರು. ರಾಜಕೀಯ ರಾರಯಲಿಯಲ್ಲಿಭಾಗವಹಿಸುವುದಕ್ಕೂ, ಪಕ್ಷದ ಚಟುವಟಿಕೆಗಳಲ್ಲಿತೊಡಗಿಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಲಿಪಿಕಾ ಅವರ ಅಮಾನತು ಆದೇಶ ಮತ್ತು ಅವರ ವಿರುದ್ಧದ ಶಿಸ್ತುಕ್ರಮಗಳನ್ನು ರದ್ದುಪಡಿಸಿತು.
from India & World News in Kannada | VK Polls https://ift.tt/2FKpNHQ