ಬೆಂಗಳೂರು: ಕನ್ನಡದ ಗಾರುಡಿಗ, ಹಿರಿಯ ಡಾ. ಚಿದಾನಂದ ಮೂರ್ತಿ ಶನಿವಾರ ಬೆಳಗ್ಗೆ 4 ಗಂಟೆಗೆ ಕೊನೆಯುಸಿರೆಳೆದಿದ್ದು, ಕನ್ನಡ ಭಾಷಾ ಮತ್ತು ಸಾಂಸ್ಕೃತ ವಲಯದಲ್ಲಿ ನಿರ್ವಾತ ಸೃಷ್ಟಿಯಾಗಿದೆ. ಈ ಮೇರು ಸಾಹಿತಿಯ ಅಗಲಿಕೆ ಹಲವಾರು ಗಣ್ಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಖ್ಯಾತ ಸಂಶೋಧಕ, ಇತಿಹಾಸಜ್ಞ, ಸತ್ಯನಿಷ್ಠ ಹೋರಾಟಗಾರ, ವಚನ ಸಾಹಿತ್ಯ, ಶಾಸನ, ಭಾಷಾಶಾಸ್ತ್ರದ ವಿದ್ವಾಂಸ ಡಾ. ಎಂ. ಚಿದಾನಂದ ಮೂರ್ತಿ ಅವರ ಅಗಲಿಕೆಯು ಕನ್ನಡ ಸಾರಸ್ವತ ಲೋಕದಲ್ಲಿ ಶೂನ್ಯವನ್ನು ಸೃಷ್ಟಿಸಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಉಂಟುಮಾಡಲಿ, ಅವರ ಕುಟುಂಬದವರಿಗೆ ಹಾಗೂ ಅಸಂಖ್ಯಾತ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ. ಕನ್ನಡಕ್ಕೆ ಮಿಡಿಯುತ್ತಿದ್ದ, , ಸಂಶೋಧಕ, ಚಿಂತಕ, ಇತಿಹಾಸಕಾರರಾಗಿದ್ದ ಚಿ.ಮೂ ಇನ್ನಿಲ್ಲದ ವಿಷಯ ನೋವಿನದ್ದು ಮತ್ತು ಅವರ ಸ್ಥಾನ ಅನನ್ಯ, ಯಾರೂ ತುಂಬಲಾಗದು. ಹಂಪಿಯ ಸ್ಮಾರಕಗಳನ್ನು ಉಳಿಸುವಲ್ಲಿ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ಇವರ ಪ್ರಯತ್ನ ಸ್ಮರಣೀಯ. ಅವರಾತ್ಮಕ್ಕೆ ಶಾಂತಿ ದೊರಕಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಎಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಹಿರಿಯ ಸಂಶೋಧಕ, ಕನ್ನಡ ಗರುಡ ಡಾ. ಚಿದಾನಂದ ಮೂರ್ತಿ ಅವರ ನಿಧನದಿಂದ ನಾಡು ಅಪರೂಪದ ವಿದ್ವಾಂಸರನ್ನು ಕಳೆದುಕೊಂಡಿದೆ. ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿದ್ದ 'ಚಿಮೂ'ಎಂದೇ ಖ್ಯಾತರಾಗಿದ್ದ ಹಿರಿಯ ಜೀವ ನಾಡು-ನುಡಿ-ಜಲಕ್ಕಾಗಿ ಅಹರ್ನಿಶಿ ಶ್ರಮಿಸಿದ್ದರು. ಮೃತರ ಕುಟುಂಬ ಸದಸ್ಯರಿಗೆ, ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಚಿದಾನಂದ ಮೂರ್ತಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ವಿಶೇಷವಾಗಿ ಹಂಪೆಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಶ್ರೀ ಎಂ ಚಿದಾನಂದಮೂರ್ತಿಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಟ್ವೀಟ್ ಮಾಡಿದ್ದಾರೆ.
from India & World News in Kannada | VK Polls https://ift.tt/2QHSv2j