ಹೊಸದಿಲ್ಲಿ: ಕೇಂದ್ರದ ಕಾರ್ಮಿಕ ವಿರೋಧಿ, ಜನವಿರೋಧಿ ನೀತಿ ಖಂಡಿಸಿ ವಾಣಿಜ್ಯ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಮುಷ್ಕರಕ್ಕೆ ಪಶ್ಚಿಮ ಬಂಗಾಳದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಹೌರಾದಲ್ಲಿ ಬುಧವಾರ ಬೆಳಗ್ಗೆಯೇ ರೈಲು ತಡೆದ ಪ್ರತಿಭಟನಾಕಾರರು ಭಾರತ್ ಬಂದ್ ನಡೆಸಿದ್ದಾರೆ. ಇದು ಕೆಲ ಸಮಯ ಪ್ರಯಾಣಿಕರಲ್ಲಿ ದಿಗಿಲು ಉಂಟುಮಾಡಿತ್ತು. ದೇಶಾದ್ಯಂತ ಸುಮಾರು 25 ಕೋಟಿ ಜನತೆ 'ದೇಶವ್ಯಾಪಿ ಮುಷ್ಕರದಲ್ಲಿ' ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಿಳಿಸಿದೆ. ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳೂ ಕೂಡ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್, ಎಟಿಎಂ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿದೆ. ಕೇಂದ್ರೀಯ ವಾಣಿಜ್ಯ ಒಕ್ಕೂಟಗಳಾದ ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್ ಮೊದಲಾದ ಸಂಘಟನೆಗಳು ಇಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಕೇಂದ್ರ ಸರಕಾರ ಕಾರ್ಮಿಕ ವಿರೋಧಿ, ಜನ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂಬುದು ಈ ಎಲ್ಲ ಸಂಘಟನೆಗಳ ಒಟ್ಟಾರೆ ಆರೋಪವಾಗಿದೆ. ಜತೆಗೆ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಕೂಡ ಈ ಸಂಘಟನೆಗಳು ಖಂಡಿಸಿದ್ದು, ಮುಷ್ಕರಕ್ಕೆ ಕರೆ ನೀಡಿವೆ. ಜನವರಿ 8ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಇದು 'ಭಾರತ್ ಬಂದ್' ಎಂಬಂತೆ ಬಿಂಬಿತವಾಗಿದ್ದು, ಅಂದು ಬಂದ್ ಅಲ್ಲ, ಮುಷ್ಕರ ಮಾತ್ರ ನಡೆಯಲಿದೆ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
from India & World News in Kannada | VK Polls https://ift.tt/39OlqcB