80ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ಸ್; ಮತ್ತೊಮ್ಮೆ ನರೇಂದ್ರನ ಪ್ರತಾಪ

ಮಂಗಳೂರು: ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್‌ ವಿವಿ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನವಾದ ಭಾನುವಾರ ಎರಡು ಕೂಟ ದಾಖಲೆ ನಿರ್ಮಾಣವಾದವು. ಜತೆಗೆ ಮೂವರು ಕ್ರೀಡಾಪಟುಗಳು ಅವಳಿ ಚಿನ್ನದ ಸಾಧನೆ ಮಾಡಿದರು. ಪುರುಷರ ಹಾಗೂ ವನಿತೆಯರ ವಿಭಾಗದ 5 ಸಾವಿರ ಮೀ. ಓಟ ಹಾಗೂ ವನಿತೆಯರ ವಿಭಾಗದ 100 ಮೀ. ಹರ್ಡಲ್ಸ್‌ ಸ್ಪರ್ಧೆಗಳು ಅವಳಿ ಸಾಧನೆಗಳಿಗೆ ಸಾಕ್ಷಿಯಾದವು. ಕೂಟದ ಮೊದಲ ದಿನ ಪುರುಷರ 10 ಸಾವಿರ ಮೀ. ಓಟದಲ್ಲಿ ನೂತನ ಕೂಟ ದಾಖಲೆ ಬರೆದಿದ್ದ (ಮಂಗಳೂರು ವಿವಿ) ಆಳ್ವಾಸ್‌ ಕಾಲೇಜಿನ ನರೇಂದ್ರ ಪ್ರತಾಪ್‌ ಸಿಂಗ್‌ ನಾಲ್ಕನೇ ದಿನ 5 ಸಾವಿರ ಮೀ. ಓಟದಲ್ಲಿ ಮತ್ತೊಂದು ಕೂಟ ದಾಖಲೆ ಬರೆದು ಅದ್ವಿತೀಯ ಸಾಧನೆ ಮೆರೆದರು. ವನಿತೆಯರ ವಿಭಾಗದಲ್ಲಿ ಶನಿವಾರ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯ ಕೋಮಲ್‌ ಜಗದಾಳೆ ಬಂಗಾರದ ಪದಕಕ್ಕೆ ಕೊರಳೊಡ್ಡಿ, ಕೂಟದಲ್ಲಿ ಎರಡನೇ ಚಿನ್ನದ ಸಾಧನೆ ಮಾಡಿದರು. 100 ಮೀ. ಓಟದಲ್ಲಿ ವೇಗದ ಓಟಗಾರ್ತಿಯಾಗಿದ್ದ ಗುಂಟೂರು ಆಚಾರ್ಯ ನಾಗಾರ್ಜುನ ವಿವಿಯ ಜ್ಯೋತಿ ಯರಾಜಿ 100 ಮೀ. ಹರ್ಡಲ್ಸ್‌ನಲ್ಲೂ ಬಂಗಾರಕ್ಕೆ ಕೊರಳೊಡ್ಡಿದರಲ್ಲದೇ ನೂತನ ಕೂಟ ದಾಖಲೆ ನಿರ್ಮಿಸಿ ಮಿಂಚಿದರು. ನರೇಂದ್ರ 5 ಸಾವಿರ ಮೀ. ಓಟವನ್ನು 14 ನಿ., 17.77 ಸೆ.ಗಳಲ್ಲಿ ಓಡಿ ಪಂಜಾಬಿ ಪಟಿಯಾಲಾ ವಿವಿಯ ಸುರೇಶ್‌ ಕುಮಾರ್‌ 2011ರಲ್ಲಿ ಸ್ಥಾಪಿಸಿದ್ದ ಕೂಟ ದಾಖಲೆಯನ್ನು (14 ನಿ, 19.39 ಸೆ.) ಅಳಿಸಿಹಾಕಿ ಕೂಟದಲ್ಲಿ ‘ಡಬಲ್‌ ರೆಕಾರ್ಡ್‌’ ಸಾಧಕಧಿರಾದರು. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್‌ನ ಪ್ರಥಮ ಬಿಎ ವಿದ್ಯಾರ್ಥಿ ಆದೇಶ್‌ (14 ನಿಮಿಷ, 30.02 ಸೆ.) ಬೆಳ್ಳಿ ಗೆದ್ದರು. ಮಂಗಳೂರಿಗೆ ದಿನದ ಎರಡನೇ ಬಂಗಾರ: ಸಂಜೆ ನಡೆದ ಜಾವೆಲಿನ್‌ ತ್ರೋ ಸ್ಪರ್ಧೆಯಲ್ಲಿ ಮಂಗಳೂರು ವಿವಿಯ ಮನು ಡಿ.ಪಿ. 73.94 ಮೀ. ದೂರ ಎಸೆದು ಮಂಗಳೂರು ವಿವಿಗೆ ಎರಡನೇ ಬಂಗಾರ ಗೆದ್ದುಕೊಟ್ಟರು. ಕೋಮಲ್‌ ಪಾರಮ್ಯ: ಮಹಿಳಾ ವಿಭಾಗದ 5 ಸಾವಿರ ಮೀ. ಓಟದಲ್ಲಿ ಪುಣೆಯ ಸಾವಿತ್ರಿ ಬಾಯಿ ಫುಲೆ ವಿವಿಯ ಕೋಮಲ್‌ ಜಗದಾಳೆ 17 ನಿಮಿಷ, 04.13 ಸೆ.ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಅವರು ಶನಿವಾರ ನಡೆದ ಮಹಿಳಾ ವಿಭಾಗದ ಸ್ಟೀಪಲ್‌ ಚೇಸ್‌ನಲ್ಲಿ ಕೂಟ ದಾಖಲೆ ಸ್ಥಾಪಿಸಿದ್ದರು. ಮಂಗಳೂರು ವಿವಿ 6 ಚಿನ್ನ, 9 ಬೆಳ್ಳಿ, 4 ಕಂಚು ಗೆದ್ದು ಒಟ್ಟು 127 ಅಂಕಗಳೊಂದಿಗೆ ಅಗ್ರಸ್ಥಾನಲ್ಲಿದೆ. ಮದ್ರಾಸ್‌ ವಿವಿ 70 ಹಾಗೂ ಕೊಟ್ಟಾಯಂ ಮಹಾತ್ಮ ಗಾಂಧಿ ವಿವಿ 47 ಅಂಕ ಕಲೆಹಾಕಿ ನಂತರದ ಸ್ಥಾನದಲ್ಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2FoddOs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...