ಪಂತ್‌ ತಮ್ಮೊಂದಿಗೆ ಇನಿಂಗ್ಸ್ ಆರಂಭಿಸಲು ಕಾರಣ ತಿಳಿಸಿದ ರೋಹಿತ್‌!

ಅಹಮದಾಬಾದ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ತಮ್ಮೊಂದಿಗೆ ಇನಿಂಗ್ಸ್‌ ಆರಂಭಿಸಲು ಕಾರಣವೇನೆಂಬುದನ್ನು ಟೀಮ್ ಇಂಡಿಯಾ ನಾಯಕ ಬಹಿರಂಗಪಡಿಸಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಸೋತ ತಂಡ ಮೊದಲು ಬ್ಯಾಟಿಂಗ್ ಮಾಡುವಂತಾಗಿತ್ತು. ಅದರಂತೆ ಶಿಖರ್‌ ಧವನ್‌ ಅನುಪಸ್ಥಿತಿಯಲ್ಲಿ ಕೆ.ಎಲ್‌ ರಾಹುಲ್‌, ನಾಯಕ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ರೋಹಿತ್‌ ಶರ್ಮಾ ಜೊತೆ ರಿಷಭ್‌ ಪಂತ್ ಇನಿಂಗ್ಸ್‌ ಆರಂಭಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಸ್ವಲ್ಪ ಹೊತ್ತು ಬ್ಯಾಟ್‌ ಮಾಡಿದ ಪಂತ್‌ ಕೇವಲ 18 ರನ್‌ ಗಳಿಸಿ ಓಡೀನ್ ಸ್ಮಿತ್‌ಗೆ ವಿಕೆಟ್‌ ಒಪ್ಪಿಸಿದ್ದರು. ಇದರ ಹೊರತಾಗಿಯೂ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 237 ರನ್‌ ಕಲೆ ಹಾಕಿತ್ತು. ಬಳಿಕ 238 ರನ್‌ ಗುರಿ ಹಿಂಬಾಲಿಸಿದ್ದ ವೆಸ್ಟ್‌ ಇಂಡೀಸ್‌ 193 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ 44 ರನ್‌ಗಳಿಂದ ಸೋತಿತ್ತು. ವಿಭಿನ್ನ ಸಂಗತಿಗಳನ್ನು ಪ್ರಯತ್ನಿಸಿದ್ದೇವೆ: ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್‌ ಶರ್ಮಾ, "ವಿಭಿನ್ನ ಸಂಗತಿಗಳನ್ನು ಪ್ರಯತ್ನಿಸಲು ನನ್ನನ್ನು ಕೇಳಲಾಗಿತ್ತು. ಹಾಗಾಗಿ ಈ ಪಂದ್ಯದಲ್ಲಿ ರಿಷಭ್‌ ಪಂತ್‌ ಇನಿಂಗ್ಸ್ ಆರಂಭಿಸಿದ್ದರು. ಒಂದೇ ಒಂದು ಪಂದ್ಯದಲ್ಲಿ ನಾವು ಇದನ್ನು ಪ್ರಯತ್ನಿಸಿದ್ದೇವೆ ಅಷ್ಟೆ. ಆದರೆ ಇದು ಶಾಶ್ವತ ಪರಿಹಾರವಲ್ಲ," ಎಂದರು. "ಮುಂದಿನ ಪಂದ್ಯಕ್ಕೆ ಶಿಖರ್‌ ಧವನ್‌ ಮರಳಲಿದ್ದಾರೆ. ವಿಭಿನ್ನ ಸಂಗತಿಗಳನ್ನು ಪ್ರಯತ್ನಿಸುವ ಮೂಲಕ ಕೆಲ ಪಂದ್ಯಗಳಲ್ಲಿ ಸೋಲುವುದರಿಂದ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ದೀರ್ಘಾವಧಿ ಗುರಿಗಳನ್ನು ಮುಟ್ಟುವುದು ನಮ್ಮ ಉದ್ದೇಶ. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಯಾವ ಸಂಯೋಜನೆ ಸರಿ ಹೊಂದಲಿದೆ ಎಂಬುದನ್ನು ನಾವು ನೋಡುತ್ತೇವೆ," ಎಂದು ಹೇಳಿದರು. ರಾಹುಲ್-ಸೂರ್ಯ ಜೊತೆಯಾಟವನ್ನು ಶ್ಲಾಘಿಸಿದ ರೋಹಿತ್‌: ಆರಂಭಿಕ ಮೂರು ವಿಕೆಟ್‌ಗಳು ಬಹುಬೇಗ ಉರುಳಿದ ಬಳಿಕ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್ ಅದ್ಭುತ ಜತೆಯಾಟವಾಡಿತ್ತು. ಆ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು. ಕೆ.ಎಲ್ ರಾಹುಲ್‌ 49 ರನ್‌ ಗಳಿಸಿ ರನ್‌ಔಟ್‌ ಆದರು. ಆದರೆ ಸೂರ್ಯಕುಮಾರ್‌ ಯಾದವ್‌ 64 ರನ್‌ ಗಳಿಸಿದರು. ಈ ಬಗ್ಗೆ ಮಾತನಾಡಿದ ರೋಹಿತ್‌, "ಸರಣಿ ಗೆಲುವು ಉತ್ತಮ ಭಾವನೆಯನ್ನು ನೀಡುತ್ತಿದೆ. ಇದರಲ್ಲಿ ಕೆಲ ಸವಾಲುಗಳು ನಮಗೆ ಎದುರಾಗಿವೆ. ಕೆ.ಎಲ್‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಅವರ ಜೊತೆಯಾಟ ಪರಿಪಕ್ವತೆಯಿಂದ ಕೂಡಿತ್ತು. ಹಾಗಾಗಿ ಅಂತಿಮವಾಗಿ ನಾವು ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಿತ್ತು. ನಾವು ಹೋರಾಟ ನಡೆಸುತ್ತೇವೆಂದು ನಮಗೆ ಗೊತ್ತಿತ್ತು. ನಮ್ಮ ಬೌಲಿಂಗ್‌ ವಿಭಾಗ ಅತ್ಯುತ್ತಮ ಪ್ರದರ್ಶನ ತೋರಿತು. ಒತ್ತಡದ ಸನ್ನಿವೇಶದಲ್ಲಿ ತಮ್ಮ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆಂಬುದು ಇಲ್ಲಿ ತುಂಬಾ ಮುಖ್ಯವಾಗಿತ್ತು," ಎಂದರು. ಇಂಥಾ ಬೌಲಿಂಗ್‌ ಸ್ಪೆಲ್‌ ನಾನು ನೋಡಿಯೇ ಇಲ್ಲ: ಅದ್ಭುತ ಬೌಲಿಂಗ್‌ ಪ್ರದರ್ಶನ ತೋರಿದ 9 ಓವರ್‌ಗಳಿಗೆ ಮೂರು ಮೇಡಿನ್‌ ಹಾಗೂ ಕೇವಲ 12 ರನ್‌ ನೀಡುವ ಮೂಲಕ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. "ಇಬ್ಬನಿ ಇದ್ದಿದ್ದರಿಂದ ನನಗೆ ಸ್ವಲ್ಪ ಅಚ್ಚರಿ ಉಂಟಾಗಿತ್ತು. ಆದರೆ ಪ್ರಸಿಧ್‌ ಕೃಷ್ಣ ಬೌಲಿಂಗ್‌ ಪ್ರದರ್ಶನ ಅದ್ಭುತವಾಗಿತ್ತು. ಈ ರೀತಿಯ ಬೌಲಿಂಗ್‌ ಸ್ಪೆಲ್‌ ಅನ್ನು ನಾನು ಈ ಹಿಂದೆ ನೋಡಿಯೇ ಇಲ್ಲ. ಪ್ರಸಿಧ್‌ ಸಾಕಷ್ಟು ವೇಗವಾಗಿ ಬೌಲ್‌ ಮಾಡಿದ್ದರು," ಎಂದು ಕನ್ನಡಿಗನನ್ನು ರೋಹಿತ್‌ ಶರ್ಮಾ ಮುಕ್ತಕಂಠದಿಂದ ಗುಣಗಾನ ಮಾಡಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/xR8QMru

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...