ಮಹಾಲಕ್ಷ್ಮಿ ಲೇಔಟ್‌ ನಲ್ಲಿ ಜಲಮಂಡಳಿ ಕಾಮಗಾರಿಯಿಂದ ಅಧ್ವಾನ; ಅಗೆದ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ !

ಮಹಾಲಕ್ಷ್ಮಿ ಲೇಔಟ್‌: ಕುರುಬರಹಳ್ಳಿ ಮಾರ್ಕೆಟ್‌ನಿಂದ ರವಿ ಬಡಾವಣೆ ಮೂಲಕ ರಿಂಗ್‌ ರಸ್ತೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿಯಿಂದ ಅಧ್ವಾನವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ 6 ತಿಂಗಳ ಹಿಂದೆ ಜಲಮಂಡಳಿ ನಡೆಸಿದೆ. ಕಾಮಗಾರಿ ಬಳಿಕ ಮಣ್ಣು ಮುಚ್ಚಿ ಹಾಗೆಯೇ ಬಿಟ್ಟಿತ್ತು. ನಿವಾಸಿಗಳು ಪದೇ ಪದೆ ದೂರಿದ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಜಲ್ಲಿಕಲ್ಲು ಹಾಕಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಲ್ಲಿಕಲ್ಲುಗಳು ಎದ್ದು ಬಂದಿದ್ದು, ರಸ್ತೆ ತುಂಬ ಹರಡಿವೆ. ಇದರಿಂದಾಗಿ ವಾಹನ ಸವಾರರು ಸ್ಕಿಡ್‌ ಆಗಿ ಬೀಳುತ್ತಿದ್ದಾರೆ. ಈ ರಸ್ತೆ ರಿಂಗ್‌ರಸ್ತೆಗೆ ಸಂಪರ್ಕ ಕಲ್ಪಿಸುವ ಕಾರಣ ವಾಹನ ಸಂಚಾರ ಹೆಚ್ಚಿರುತ್ತದೆ. ಪೀಣ್ಯದ ನಾನಾ ಕಾರ್ಖಾನೆಗಳು, ಗಾರ್ಮೆಂಟ್‌ಗಳಿಗೆ ತೆರಳುವ ನೌಕರರು ಇದೇ ರಸ್ತೆಯನ್ನು ಬಳಸುತ್ತಾರೆ. ಕಂಪನಿ ವಾಹನಗಳು ಬರುತ್ತವೆ. ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳು ಬಂದಾಗ ದ್ವಿಚಕ್ರ ವಾಹನ ಸವಾರರು ಜಲ್ಲಿಕಲ್ಲುಗಳ ಮೇಲೆಯೇ ಸಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ವಾರ್ಡ್‌ ವ್ಯಾಪ್ತಿಯ ಹಲವೆಡೆ ಗುಂಡಿಗಳು ಬಾಯ್ದೆರೆದಿದ್ದು, ಮುಚ್ಚುವ ಕಾಮಗಾರಿ ನಡೆದಿಲ್ಲ. ಈ ಕುರಿತು ನಂದಿನಿ ಲೇಔಟ್‌ ವಾರ್ಡ್‌ ಬಿಬಿಎಂಪಿ ಕಾಮಗಾರಿ ವಿಭಾಗದ ಇನ್‌ಸ್ಪೆಕ್ಟರ್‌ ವೆಂಕಟೇಶ್‌ ಅವರನ್ನು ಮಾತನಾಡಿಸಿದಾಗ , ''ಜಲಮಂಡಳಿ ಕಾಮಗಾರಿಯಿಂದ ರಸ್ತೆ ಹಾಳಾಗಿದೆ. ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪಾಲಿಕೆಯಿಂದಲೇ ಜಲ್ಲಿಕಲ್ಲುಗಳನ್ನು ಹಾಕಿಸಲಾಗಿದೆ. ರಸ್ತೆ ದುರಸ್ತಿಗೆ ಮತ್ತೊಮ್ಮೆ ಸೂಚಿಸಲಾಗುವುದು,'' ಎಂದರು. ''ಈಗಾಗಲೇ ಗುಂಡಿ ಮುಚ್ಚುವ ಕಾರ್ಯ ನಾನಾ ಕಡೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಗುಂಡಿ ಮುಕ್ತ ರಸ್ತೆಯನ್ನಾಗಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು,'' ಎಂದು ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಮ್ಮರಸು ಹೇಳಿದ್ದಾರೆ. ಪದೇ ಪದೆ ದೂರು ನೀಡಿದ್ದಕ್ಕೆ ಜಲ್ಲಿಕಲ್ಲುಗಳನ್ನು ಹಾಕಲಾಗಿದೆ. ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಬೈಕ್‌ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ರಸ್ತೆಗೆ ಡಾಂಬರು ಅಳವಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿದೆ. ಶೋಭಾ, ಗೃಹಿಣಿ


from India & World News in Kannada | VK Polls https://ift.tt/3bNcIh2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...