ಬೆಂಗಳೂರು: ಸಿಎಂ ಬುಧವಾರ ಮಧ್ಯಾಹ್ಮ ದೆಹಲಿಗೆ ತೆರಳಲಿದ್ದಾರೆ. ಬೊಮ್ಮಾಯಿ ಭೇಟಿ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳ ಲಾಬಿಯೂ ತೀವ್ರಗೊಂಡಿದೆ. ಬಾಕಿ ಉಳಿದಿರುವ 4 ಸ್ಥಾನಗಳಿಗೆ ಪೈಪೋಟಿ ತೀವ್ರಗೊಂಡಿದ್ದು ಸಿಎಂ ನಿವಾಸಕ್ಕೆ ಸಚಿವಾಕಾಂಕ್ಷಿಗಳ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸಿಎಂ ನಿವಾಸಕ್ಕೆ ಸಚಿವಾಕಾಂಕ್ಷಿ ಆರ್. ಶಂಕರ್ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ಶಂಕರ್ ಬೇಡಿಕೆ ಇಟ್ಟಿದ್ದಾರೆ. ತನ್ನನ್ನು ಪರಿಗಣಿಸುವಂತೆ ದೆಹಲಿ ನಾಯಕರ ಜತೆ ಚರ್ಚಿಸಲು ಶಂಕರ್ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇವರಷ್ಟೇ ಅಲ್ಲ, ಮತ್ತೊಬ್ಬ ಸಚಿವಾಕಾಂಕ್ಷಿ ಸುರಪುರ ಶಾಸಕ ರಾಜುಗೌಡ ಕೂಡಾ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಉಳಿದ ನಾಲ್ಕು ಸ್ಥಾನಗಳ ಭರ್ತಿ ವೇಳೆ ತಮ್ಮನ್ನು ಪರಿಗಣಿಸಲು ರಾಜುಗೌಡ ಮನವಿ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜತೆ ಚರ್ಚಿಸಲು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಂಗಳವಾರ ರಾತ್ರಿ ಸಿಎಂ ಭೇಟಿ ಮಾಡಿದ ಪೂರ್ಣಿಮಾ ಶ್ರೀನಿವಾಸ್ ಈ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಹೊಸ ಸಂಪುಟ ರಚನೆ ವೇಳೆ ಪೂರ್ಣಿಮಾರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಈ ನಿಟ್ಟಿನಲ್ಲಿ ಇದೀಗ ಸಂಪುಟ ಪುನಾರಚನೆ ವೇಳೆ ನನ್ನನ್ನು ಪರಿಗಣಿಸುವಂತೆ ಪೂರ್ಣಿಮಾ ಅವರು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಇರುವ ನಾಲ್ಕು ಸ್ಥಾನಗಳಿಗೆ ಸಚಿವಾಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ. ಮಧ್ಯಾಹ್ಮ ದೆಹಲಿಗೆ ತೆರಳಲಿರುವ ಸಿಎಂ ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಕುರಿತಾಗಿಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ ಈ ನಿರ್ಧಾರವನ್ನು ಸಿಎಂ ದೆಹಲಿ ಭೇಟಿ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತದ ಎಂಬುವುದು ಖಚಿತಗೊಂಡಿಲ್ಲ.
from India & World News in Kannada | VK Polls https://ift.tt/3jcfAsg