ಚಂಡೀಗಢ: ಪಕ್ಷ ಹಾಗೂ ಸರಕಾರದ ನಡುವೆ ಉತ್ತಮ ಹೊಂದಾಣಿಕೆಗಾಗಿ ಹಿರಿಯ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ)ಅಧ್ಯಕ್ಷ ತೀರ್ಮಾನಿಸಿದ್ದಾರೆ. ಶುಕ್ರವಾರ ಕ್ಯಾ.ಸಿಂಗ್ ಅವರನ್ನು ಸಿಧು ಭೇಟಿ ಮಾಡಿದ್ದ ವೇಳೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಹತ್ತು ಸದಸ್ಯರ ಸಮಿತಿಗೆ ಕ್ಯಾ.ಸಿಂಗ್ ಅಧ್ಯಕ್ಷರಾಗಿರುತ್ತಾರೆ. ಸಿಧು, ಪಿಪಿಸಿಸಿಯ ನಾಲ್ವರು ಕಾರ್ಯಾಧ್ಯಕ್ಷರು ಮತ್ತು ನಾಲ್ವರು ಹಿರಿಯ ಸದಸ್ಯರು ಸಮಿತಿ ಸದಸ್ಯರಾಗಿರುತ್ತಾರೆ. ಪಕ್ಷ, ಸರಕಾರದ ನಡುವೆ ಉತ್ತಮ ಸಮನ್ವಯ ಸಾಧಿಸುವುದು, ಸರಕಾರದ ಯೋಜನೆಗಳಿಗೆ ವೇಗ ನೀಡುವುದು ಸಮಿತಿ ರಚನೆ ಹಿಂದಿನ ಉದ್ದೇಶವಾಗಿದೆ. ಇದರೊಂದಿಗೆ ಈ ಇಬ್ಬರು ನಾಯಕರ ನಡುವೆ ವರ್ಷಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಇಬ್ಬರಿಗೂ ಕಿವಿಮಾತು ಹೇಳಿದ್ದರು. ಪಕ್ಷದ ಶಾಸಕರ ಅಹವಾಲು ಆಲಿಸಲು ಪಿಪಿಸಿಸಿ ಕಚೇರಿಯಲ್ಲಿ ನಿತ್ಯ ಒಬ್ಬ ಸಚಿವರು ಸರದಿ ಪ್ರಕಾರ ನಿಗದಿತ ಸಮಯದಲ್ಲಿ ಹಾಜರಿರಬೇಕು ಎಂದೂ ಮುಖ್ಯಮಂತ್ರಿ ಸಿಂಗ್ ಆದೇಶಿಸಿದ್ದಾರೆ. ಪಂಜಾಬ್ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ.
from India & World News in Kannada | VK Polls https://ift.tt/3mlIJmz