ಲೀಡ್ಸ್: ಇಂಗ್ಲೆಂಡ್ ವಿರುದ್ಧ ಪಂದ್ಯದ ಮೊದಲನೇ ದಿನ ನಾಯಕ ಪದೇ-ಪದೆ ಫೀಲ್ಡ್ ಅಂಪೈರ್‌ಗಳಿಗೆ ಪ್ರಶ್ನೆ ಮಾಡುತ್ತಿದ್ದ ಬಗ್ಗೆ ಆಂಗ್ಲರ ಮಾಜಿ ಕ್ರಿಕೆಟಿಗ ಡೇವಿಡ್ ಲಾಯ್ಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ಜೇಮ್ಸ್ ಆಂಡರ್ಸನ್ ಅವರ ಮಾರಕ ದಾಳಿಗೆ ನಲುಗಿ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 78ರನ್‌ಗೆ ಆಲ್‌ಔಟ್ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಮೊದಲನೇ ದಿನದಾಟದ ಅಂತ್ಯಕ್ಕೆ 42 ಓವರ್‌ಗಳಿಗೆ ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಸಿದ್ದು, 42 ರನ್ ಮುನ್ನಡೆ ಗಳಿಸಿದೆ. ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಎರಡು ನೋ ಬಾಲ್ ಹಾಗೂ ಒಂದು ವೈಡ್ ಬಾಲ್ ಹಾಕಿದ್ದರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ, ಫೀಲ್ಡ್ ಅಂಪೈರ್ ಬಳಿ ವಾದ ನಡೆಸಿದ್ದರು. ದಿ ಡೈಲಿ ಮೇಲ್‌ನಲ್ಲಿ ಅಂಕಣ ಬರೆದಿರುವ ಡೇವಿಡ್ ಲಾಯ್ಡ್, ವಿರಾಟ್ ಕೊಹ್ಲಿಯ ಕೆಲ ನಿರ್ಧಾರಗಳಲ್ಲಿ ಭಿನ್ನಭಿಪ್ರಾಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗೂ ಅಂಪೈರ್‌ಗಳ ನಿರ್ಧಾರಕ್ಕೆ ನಾವು ಬದ್ದರಾಗಿಬೇಕು ಎಂದು ಹೇಳಿದ್ದಾರೆ. " ವಿಶ್ವದ ಶ್ರೇಷ್ಠ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು, ಆದರೆ ಮೂರನೇ ಪಂದ್ಯದ ಮೊದಲನೇ ದಿನ ಅಂಪೈರ್‌ಗೆ ಪದೇ-ಪದೆ ಪ್ರಶ್ನೆ ಮಾಡುತ್ತಿದ್ದ ಬಗ್ಗೆ ನನಗೆ ತುಂಬಾ ನಿರಾಶೆಯಾಗಿದೆ. ತಮ್ಮ ಮೊದಲನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಎರಡು ಬಾರಿ ನೋ ಬಾಲ್ ಎಸೆದಿದ್ದರು, ನಂತರ ಆಫ್ ಸೈಡ್ ವೈಡ್ ಹಾಕಿದ್ದರು. ಈ ಬಗ್ಗೆ ಅಂಪೈರ್ ಅಲೆಕ್ಸ್ ವಾರ್ಫ್ ಸರಿಯಾದ ತೀರ್ಪನ್ನೇ ಪ್ರಕಟಿಸಿದ್ದರು. ಆದರೆ, ಮೊದಲನೇ ಸ್ಲಿಪ್‌ನಲ್ಲಿದ್ದ ಕೊಹ್ಲಿಗೆ ಮಾತ್ರ ಈ ತೀರ್ಪು ತೃಪ್ತಿ ತಂದಿರಲಿಲ್ಲ," ಎಂದು ಲಾಯ್ಡ್ ಹೇಳಿದ್ದಾರೆ. "ಆ ಓವರ್ ಮುಗಿದ ಬಳಿಕ ವಿರಾಟ್ ಕೊಹ್ಲಿ, ಮತ್ತೊಮ್ಮೆ ತೀರ್ಪನ್ನು ಪರಿಶೀಲಿಸಲು ಕೇಳಿದರು. ಆದರೂ, ವಿಡಿಯೋ ರೀಪ್ಲೆನಲ್ಲಿ ಅದು ವೈಡ್ ಆಗಿರುವುದು ಸ್ಪಷ್ಟವಾಗಿತ್ತು. ನೋಡಿ, ಯಾವುದು ಸರಿಯಾದ ತೀರ್ಪು ಎಂಬುದು ಅಂಪೈರ್‌ಗಳಿಗೆ ಗೊತ್ತಿರುತ್ತದೆ. ಹಾಗಾಗಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲು ಅವರಿಗೇ ಬಿಟ್ಟು ಬಿಡಿ," ಎಂದು ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರದ ಬಗ್ಗೆ ಟೀಮ್ ಇಂಡಿಯಾ ವಿಷಾದಿಸುತ್ತಿರಬಹುದು ಎಂದು ಡೇವಿಡ್ ಲಾಯ್ಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವುದು ಭಾರತ ತಂಡದ ನೇರ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಪಿಚ್ ಸ್ವಲ್ಪ ಬ್ಯಾಟಿಂಗ್‌ಗೆ ಕಠಿಣವಾಗಿತ್ತು. ಆದರೆ, ಇಂಡಿಯನ್ ಬ್ಯಾಟ್ಸ್‌ಮನ್‌ಗಳಿಗೆ ಗಾಳಿಯಲ್ಲಿ ಆಡುವುದರಲ್ಲಿ ಸಮಸ್ಯೆ ಇದೆ. ಆರಂಭದಿಂದಲೂ ಚೆಂಡು ಸ್ವಿಂಗ್ ಆಗುತ್ತಿತ್ತು, ಈ ಅವಕಾಶವನ್ನು ಜೇಮ್ಸ್ ಆಂಡರ್ಸನ್ ಮಿಸ್ ಮಾಡಿಕೊಳ್ಳಲಿಲ್ಲ," ಎಂದು ಹೇಳಿದರು. "ಭಾರತ ತಂಡ ಕೇವಲ 50 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ, ನಾವೇ ಮೊದಲು ಬೌಲ್ ಮಾಡಬೇಕಾಗಿತ್ತೆಂಬ ಭಾವನೆ ಭಾರತೀಯ ಬೌಲರ್‌ಗಳಿಗೆ ಬಂದಿರಬಹುದು. ಆದರೆ, ಭಾರತ ಕೇವಲ 78 ರನ್‌ಗಳಿಗೆ ಆಲ್‌ಔಟ್ ಆಗಿರುವುದನ್ನು ನೋಡಲು ಕಷ್ಟವಾಗುತ್ತದೆ," ಎಂದು ತಿಳಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Dglfp8