
ಮುಂಬಯಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಟಗಾರರೆಲ್ಲ ಕ್ವಾರಂಟೈನ್ ಸಮಯವನ್ನು ಮನೆಯಲ್ಲೇ ಕಳೆಯುತ್ತಿದ್ದಾರೆ. ಈ ಮಧ್ಯೆ ಹಿಟ್‌ಮ್ಯಾನ್ ಖ್ಯಾತಿಯ ಹಾಗೂ ಬಲಗೈ ವೇಗದ ಬೌಲರ್ ಜೊತೆಯಾಗಿ ಇನ್‌ಸ್ಟಾಗ್ರಾಂ ಪುಟದಲ್ಲಿ ಲೈವ್ ಕಾಣಿಸಿಕೊಂಡಿದ್ದರು. ಈ ವೇಳೆಯಲ್ಲಿ ಮುಂಬೈ ಇಂಡಿಯನ್ಸ್ ನಾಯಕರೂ ಆಗಿರುವ ರೋಹಿತ್ ಶರ್ಮಾ ಹಾಗೂ ಸ್ಪೀಡ್ ಸ್ಟಾರ್ ಜಸ್ಪ್ರೀತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಿಸ್ಟ್ ಸ್ಪಿನ್ನರ್ ಜೊತೆಗೆ ಸ್ನೇಹಪರವಾದ ಗೇಲಿ ಮಾತಿನಲ್ಲಿ ಭಾಗಿಯಾಗಿದ್ದರು. ಈ ವೇಳೆಯಲ್ಲಿ ಜಸ್ಪ್ರೀತ್ ಬುಮ್ರಾ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಯುಜ್ವೇದ್ರ ಚಹಲ್ ವಿರುದ್ಧ ಬೌಲಿಂಗ್ ಮಾಡಲು ಬಯಸುವುದಾಗಿ ತಿಳಿಸಿದ್ದರು. ಅಲ್ಲದೆ ಚಹಲ್‌ಗೆ ಸಿಕ್ಸರ್ ಹೊಡೆಯುವಂತೆ ಚಾಲೆಂಜ್ ಹಾಕಿದ್ದರು. ಬುಮ್ರಾಗೆ ಸಾಥ್ ನೀಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಚಹಲ್ ವಿರುದ್ಧ ದಾಳಿ ಮಾಡಲು ಬುಮ್ರಾಗಾಗಿ ಒಂದು ಓವರ್ ಉಳಿಸಿಕೊಳ್ಳಲಿದ್ದೇನೆ ಎಂದಿದ್ದರು. ಇಂಗ್ಲೆಂಡ್‌ನಲ್ಲಿ ಸ್ಟ್ರೇಟ್ ಡ್ರೈವ್ ಬಾರಿಸಿದ ಬಳಿಕ ಚಹಲ್ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಆದರೆ ಚಹಲ್ ಇದುವರೆಗೆ ಸಿಕ್ಸರ್ ಬಾರಿಸಿಲ್ಲ ಎಂಬುದನ್ನು ಮನಗಾಣಬೇಕು. ಇನ್ನೊಂದೆಡೆ ವಿಶ್ವದ ನಂಬರ್ ವನ್ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ವಿರುದ್ಧ ನೀನು (ಬುಮ್ರಾ) ಸಿಕ್ಸರ್ ಬಾರಿಸಿದ್ದೀಯಾ ಎಂಬುದನ್ನು ನೆನಪಿಸಬೇಕಾಗಿದೆ ಎಂದಿದ್ದರು. ಈ ವೇಳೆಯಲ್ಲಿ ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರತಿಕ್ರಿಯೆ ನೀಡಿದ ಯುಜ್ವೇಂದ್ರ ಚಹಲ್, ಮುಂಬೈ ಇಂಡಿಯನ್ಸ್ ತಂಡವು ಲೆಗ್ ಸ್ಪಿನ್ನರನ್ನು ಮಿಸ್ ಮಾಡಿಕೊಳ್ಳುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ರೋಹಿತ್, ಒಂದು ವೇಳೆ ಮುಂಬೈ ಇಂಡಿಯನ್ಸ್ ಸೋಲುತ್ತಿದ್ದರೆ ನಾವು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ ನಾವು ಗೆಲ್ಲುತ್ತಿದ್ದೇವೆ. ಇನ್ಯಾಕೆ ಮಿಸ್ ಮಾಡಿಕೊಳ್ಳಲಿ? ನೀವು ಬೆಂಗಳೂರಿನಲ್ಲಿಯೇ ಕುಳಿತುಕೊಳ್ಳು. ಇದುವೇ ನಿನಗೆ ಯೋಗ್ಯ ಪರಿಸ್ಥಿತಿ ಎಂದು ಕಾಲೆಳೆದಿದ್ದರು. ಇವೆಲ್ಲವೂ ಇನ್‌ಸ್ಟಾಗ್ರಾಂ ಪುಟದಲ್ಲಿ ನಡೆದ ಸಂಭಾಷಣೆಯಾಗಿದ್ದರೆ ಇದಕ್ಕೆ ಮಸಾಲಾ ಬೆರೆಸಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು, ಚಹಲ್ ವಿರುದ್ದ ಬುಮ್ರಾ ಬೌಲಿಂಗ್ ಮಾಡುವುದನ್ನು ನೋಡಲು ಅತೀವ ಉತ್ಸುಕರಾಗಿದ್ದೇವೆ ಎಂದು ಟ್ವೀಟ್ ಮಾಡಿತ್ತು. ಇದಕ್ಕೀಗ ತಕ್ಕ ಉತ್ತರ ನೀಡಿರುವ ಚಹಲ್, 'ಕನಸು ಕಾಣುತ್ತಿರಿ ನಾನು ನಂ.10 ಅಥವಾ ನಂ.11 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ. ನನಗಿಂತಲೂ ಮೊದಲು ಆ್ಯರೋನ್ ಫಿಂಚ್, ಎಬಿಡಿ ಸರ್, ಹಾಗೂ ಕಿಂಗ್ ಕೊಹ್ಲಿ ಅಲ್ಲಿದ್ದಾರೆ. ಸಾಧ್ಯವಾದರೆ ಮೊದಲು ಅವರನ್ನು ಔಟ್ ಮಾಡಿ. ಆಮೇಲೆ ನನ್ನ ಬ್ಯಾಟಿಂಗ್ ಬಗ್ಗೆ ಚರ್ಚಿಸೋಣ. ಸುರಕ್ಷಿತವಾಗಿರಿ' ಎಂದು ಟ್ವೀಟ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡವು ನಿಕಟ ಪೈಪೋಟಿಯನ್ನು ಕಾಯ್ದುಕೊಂಡಿದೆ. ಅಭಿಮಾನಿಗಳ ಪಾಲಿಗಂತೂ ಇತ್ತಂಡಗಳ ಪಂದ್ಯವು ರೋಚಕ ಕ್ಷಣಗಳಿಗೆ ಕಾರಣವಾಗಿದೆ. ಈ ನಡುವೆ ಇತ್ತಂಡ ಆಟಗಾರರ ಸ್ನೇಹತ್ವದಿಂದ ಗೇಲಿಮಾತಿನಲ್ಲಿ ಭಾಗಿಯಾಗಿರುವುದು ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ. ಇವರೆಲ್ಲರೂ ಟೀಮ್ ಇಂಡಿಯಾ ಪರ ಉತ್ತಮ ಬಾಂಧವ್ಯವ್ನನು ಕಾಯ್ದುಕೊಂಡಿದ್ದಾರೆ. ಏತನ್ಮಧ್ಯೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದ್ದು, ಈ ಬಾರಿ ಆಯೋಜನೆಯಾಗುವುದು ಅನುಮಾನವೆನಿಸಿದೆ. ಅತ್ತ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏಪ್ರಿಲ್ 13ರ ವರೆಗೆ ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aK4ggf