2005ರಲ್ಲಿ ಭಾರತ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದ ಪಾಕ್ ಆಟಗಾರರು !

ಹೊಸದಿಲ್ಲಿ: 2005ನೇ ಇಸವಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತ ಪ್ರವಾಸವನ್ನು ಕೆೈಗೊಂಡಿತ್ತು. ಅಲ್ಲದೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಭರ್ಜರಿ ಗೆಲುವು ಬಾರಿಸಿತ್ತು. ಈ ಮೂಲಕ ಸೌರವ್ ಗಂಗೂಲಿ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡವು ತವರು ನೆಲದಲ್ಲಿ ಹೀನಾಯ ಸೋಲನ್ನು ಎದುರಿಸಿತ್ತು. ಈ ನಡುವೆ ಕೆಲವು ಪ್ರಮುಖ ಆಟಗಾರರು ಭಾರತ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದರು ಎಂಬುದನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಜ್ ಉಲ್ ಹಕ್ ಬಹಿರಂಗಪಡಿಸಿದ್ದಾರೆ. "ಕೆಲವು ಪ್ರಮುಖ ಆಟಗಾರರು ಭಾರತ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದರು. ಭಾರತದ ಪ್ರಬಲ ಬ್ಯಾಟಿಂಗ್ ಪಡೆಯ ವಿರುದ್ಧ ನಾವು ದುರ್ಬಲ ದಾಳಿಯನ್ನು ಹೊಂದಿದ್ದೆವು. ಈ ಸರಣಿಯಲ್ಲಿ ಸೋತರೆ ನನ್ನನ್ನು ನಾಯಕತ್ವ ಸ್ಥಾನದಿಂದ ತೆಗೆದು ಹಾಕಲಿದ್ದಾರೆ ಎಂದವರು ಅಂದುಕೊಂಡಿದ್ದರು. ಇದು ಅವರಿಗೆ ಅವಕಾಶ ಸಿಗಲು ಕಾರಣವಾಗಲಿದೆ ಎಂದು ನಂಬಿದ್ದರು" ಎಂದು ಹಕ್ ವಿವರಿಸಿದರು. ಮೊಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೆ ಕೋಲ್ಕತಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 195 ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಪರಿಣಾಮ ಬೆಂಗಳೂರಿನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಪಾಕ್ ಪಾಲಿಗೆ 'ಮಾಡು ಇಲ್ಲವೇ ಮಡಿ' ಎನಿಸಿತ್ತು. ಅಲ್ಲದೆ ಭರ್ಜರಿ ಆಟ ಪ್ರದರ್ಶಿಸಿದ ಪಾಕಿಸ್ತಾನ 168 ರನ್ ಅಂತರದ ಗೆಲುವು ದಾಖಲಿಸಿತ್ತು. ಅಲ್ಲದೆ ಹೈದರಾಬಾದ್‌ನಲ್ಲಿ ನಡೆದ ಅಂತಿಮ ಪಂದ್ಯವನ್ನು ಎಂಟು ವಿಕೆಟ್ ಅಂತರದಿಂದ ಜಯಿಸಿದ ಪಾಕಿಸ್ತಾನ ಭಾರತ ನೆಲದಲ್ಲಿ ಸ್ಮರಣೀಯ ಟೆಸ್ಟ್ ಸರಣಿ ಗೆಲುವು ದಾಖಲಿಸಿತ್ತು. ಟೆಸ್ಟ್ ಪಂದ್ಯ ಇಂಜಮಾಮ್ ಪಾಲಿಗೂ ಅತಿ ಮಹತ್ವೆನಿಸಿತ್ತು. ಯಾಕೆಂದರೆ 100ನೇ ಟೆಸ್ಟ್ ಮೈಲುಗಲ್ಲನ್ನು ತಲುಪಿದ್ದರು. "ಬೆಂಗಳೂರಿನಲ್ಲಿ 100ನೇ ಟೆಸ್ಟ್ ಪಂದ್ಯ ನನ್ನ ಪಾಲಿಗೆ ವಿಶೇಷವೆನಿಸಿದೆ. ಇಡೀ ಭಾರತ ಪ್ರವಾಸ ವಿಶೇಷವೆನಿಸಿತ್ತು" ಎಂದಿದ್ದಾರೆ. "ಒಂದು ತಂಡವಾಗಿ ಬೆಂಗಳೂರು ಟೆಸ್ಟ್ ಮುಖ್ಯವಾಗಿತ್ತು. 2005ರಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಅಲ್ಲಿಗೆ ತೆರಳುತ್ತಿರುವ ಅತಿ ದುರ್ಬಲವಾದ ಪಾಕಿಸ್ತಾನ ತಂಡ ಎಂದೆಲ್ಲ ಮಾಜಿ ಕ್ರಿಕೆಟ್ ವಿಶ್ಲೇಷಕರು ಕಡೆಗಣಿಸಿದ್ದರು. ಪ್ರಬಲ ಭಾರತ ವಿರುದ್ಧ ನಾವು ಹೀನಾಯವಾಗಿ ಸೋಲಲಿದ್ದೇವೆ ಎಂದವರು ನಂಬಿದ್ದರು. ನಾವು ಪ್ರಬಲವಾದ ಬೌಲಿಂಗ್ ದಾಳಿಯನ್ನು ಹೊಂದಿರಲಿಲ್ಲ. ಹಾಗೆಯೇ ತಂಡದ ನಾಯಕರಾಗಿ ಎದುರಾಳಿಯನ್ನು ಹೇಗೆ ಆಲೌಟ್ ಮಾಡುವುದೆಂದು ಚಿಂತಿತನಾಗಿದ್ದೆ. ಭಾರತ ಸರಣಿ ಸೋತರೆ ನನ್ನ ನಿರ್ಗಮನವಾಗಲಿದೆ ಎಂದು ಅಂದುಕೊಂಡು ಅನೇಕ ಪಾಕ್ ಕ್ರಿಕೆಟಿಗರು ಭಾರತ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದರು" ಎಂದು ತಿಳಿಸಿದರು. ಬೆಂಗಳೂರು ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ 184 ರನ್ ಕಲೆ ಹಾಕಿದ್ದರು. ಇವರಿಗೆ ತಕ್ಕ ಸಾಥ್ ನೀಡಿದ ಯೂನಿಸ್ ಖಾನ್ (267) ದ್ವಿಶತಕ ಸಾಧನೆ ಮಾಡಿದ್ದರು. ಭಾರತದ ಪರ (201) ದ್ವಿಶತಕ ಬಾರಿಸಿದ್ದರೂ ಪಂದ್ಯ ರಕ್ಷಿಸಲಾಗಲಿಲ್ಲ. ಪಾಕಿಸ್ತಾನದ 570 ರನ್‌ಗಳಿಗೆ ಉತ್ತರ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 449 ರನ್ ಪೇರಿಸಿತ್ತು. ಬಳಿಕ ಪಾಕ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಿರುಸಿನಿಂದ ಎರಡು ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಬಳಿಕ ಕೊನೆಯ ದಿನದಾಟದಲ್ಲಿ ಗುರಿ ಬೆನ್ನಟ್ಟಿದ ಭಾರತ 214 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. "ಕೊನೆಯ ದಿನದಾಟದಲ್ಲಿ ಭಾರತ ಪಂದ್ಯವನ್ನು ರಕ್ಷಿಸಬೇಕಿತ್ತು. ಹಾಗಾಗಿ ನೆಗೆಟಿವ್ ಮನೋಸ್ಥಿತಿಯಿಂದ ಬ್ಯಾಟಿಂಗ್‌ಗಿಳಿಯಿತು. ನಮ್ಮಿಂದ ಪಂದ್ಯ ಕಸಿದುಕೊಳ್ಳಬಹುದಾದ ಏಕ ಮಾತ್ರ ಆಟಗಾರ ವೀರೇಂದ್ರ ಸೆಹ್ವಾಗ್ ಎಂಬುದು ತಿಳಿದಿತ್ತು. ವೀರು ವಿಕೆಟ್ ಪಡೆದರೆ ಅವರಿಂದ ಬೆನ್ನಟ್ಟಲು ಸಾಧ್ಯವಿಲ್ಲ ಎಂಬುದನ್ನು ನನ್ನ ತಂಡಕ್ಕೆ ತಿಳಿಸಿದ್ದೆ. ಆ ದಿನ ಸೆಹ್ವಾಗ್‌ರನ್ನು ಅಬ್ದುಲ್ ರಜಾಕ್ ರನೌಟ್ ಮಾಡಿದರು. ಅಲ್ಲಿಂದ ಬಳಿಕ ಭಾರತ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಪರಿಣಾಮ ಸಚಿನ್‌ ತೆಂಡೂಲ್ಕರ್‌ಗೂ ಹೆಚ್ಚು ರನ್ ಗಳಿಸಲಾಗಲಿಲ್ಲ. ಭಾರತವನ್ನು ಆಲೌಟ್ ಮಾಡಿದಾಗ ದಿನದಂತ್ಯಕ್ಕೆ ಐದಾರು ಓವರ್‌ಗಳಷ್ಟೇ ಬಾಕಿ ಉಳಿದಿದ್ದವು. ಇದು ಹಿಂದಿನ ದಿನವೇ ಡಿಕ್ಲೇರ್ ಮಾಡಿ ಭಾರತವನ್ನು ಆರು ಓವರ್‌ಗಳಷ್ಟು ಆಡಿಸಿದ ನನ್ನ ನಿರ್ಧಾರವನ್ನು ಸರಿಯೆಂದು ಸಾಬೀತುಪಡಿಸಿತ್ತು" ಎಂದು ಹಕ್ ನೆನಪುಗಳನ್ನು ಮೆಲುಕು ಹಾಕಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2wRV2jx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...