
ಬೆಂಗಳೂರು: "ಯಾವುದೇ ವ್ಯಕ್ತಿಗಳ ವೈಯುಕ್ತಿಕ ಆಶಯಕ್ಕೆ ಮೀರಿದ ಸಂಕಷ್ಟದಲ್ಲಿ ಇಂದು ಜಗತ್ತು ನಿಂತಿದೆ. ನಾನಾಗಲಿ ಮತ್ತು ನನ್ನ ಸಹೋದರರಂತಿರುವ ಶ್ರೀ ರಾಮುಲು ಆಗಲಿ ಟೊಂಕ ಕಟ್ಟಿ ನಿಂತಿರುವುದು ಕೊರೊನಾ ಮಹಾಮಾರಿಯನ್ನು ಬಗ್ಗು ಬಡಿಯಲು ಮತ್ತು ಜನಹಿತ ಕಾಯುವುದೇ ನಮ್ಮ ಧ್ಯೇಯ. ಇದರಲ್ಲಿ ಪ್ರಚಾರ ಪಡೆಯುವ ಅಗತ್ಯ ಏನಿದೆ? ನಮ್ಮಿಬ್ಬರಲ್ಲಿ ಯಾವುದೇ ವೈಮನಸ್ಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ಹೇಳಿಕೆ ನೀಡಿದರು. ನಾವಿಬ್ಬರು ಕೂಡ ಜನರ ಮಧ್ಯೆ ಇದ್ದು, ಜನಸೇವೆ ಮಾಡಿಕೊಂಡು ಜನ ಪ್ರತಿನಿಧಿಗಳಾದವರು. ನಮ್ಮ ಜನರಿಂದ ಬರುವ ಶಹಬಾಷ್ ಗಿರಿಯೇ ನಮಗೆ ಶ್ರೀ ರಕ್ಷೆ. ಇದರಲ್ಲಿ ಪ್ರಚಾರದ ಮಾತೆಲ್ಲಿ? ಇನ್ನು, ಜನ ಸಂಕಷ್ಟದಲ್ಲಿ ಇರುವ ಈ ಸಮಯದಲ್ಲಿ, ನಮ್ಮಿಬ್ಬರ ನಡುವೆ ಕಂದಕ ಹುಟ್ಟು ಹಾಕಿ, ಸುಳ್ಳು ಸುದ್ದಿ ಹಬ್ಬಿಸುವ ಮನಸ್ಥಿತಿ ಕೊರೊನಾಕ್ಕಿಂತ ಅಪಾಯಕಾರಿ. ನಾನೊಬ್ಬ ವೈದ್ಯ, ಅದಕ್ಕಿಂತ ಹೆಚ್ಚಾಗಿ ಜನಸೇವೆಗಯಲ್ಲಿ ತೊಡಗಿಸಿಕೊಂಡವನು. ಈ ರೀತಿಯ ಮಾತುಗಳಿಗೆ ಧೃತಿಗೆಟ್ಟು ಕರ್ತವ್ಯ ವಿಮುಖನಾಗುವವನು ನಾನಲ್ಲ. ಪ್ರತಿಯೊಂದು ಟೀಕೆ, ಪ್ರತಿ ಬಾರಿ ನನ್ನನ್ನು ಇನ್ನಷ್ಟು ಬಲಶಾಲಿಯಾಗಿ ಮಾಡಿದೆ, ನನಗೆ ಆತ್ಮ ಸ್ಥೈರ್ಯ ತುಂಬುತ್ತದೆ. “ನಿಂದಕರಿರಬೇಕು“ ಎನ್ನುವ ಹಿರಿಯರ ಮಾತಿನಂತೆ, ಮುನ್ನುಗಿ ಇನ್ನಷ್ಟು ಜನತಾ ಜನಾರ್ಧನ ಸೇವೆ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು. ನಮ್ಮ ಒಗ್ಗಟನ್ನು ಕೊರೊನಾ ಮಹಾಮಾರಿಯನ್ನು ಓಡಿಸುವಲ್ಲಿ ತೋರಿಸೋಣ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಅವರವರ ದೇವರು ಒಳ್ಳೆ ಬುದ್ದಿ ಕೊಡಲೆಂದು ಪ್ರಾರ್ಥಿಸುತ್ತೇನೆ." ಎಂದರು.
from India & World News in Kannada | VK Polls https://ift.tt/3dWffFh