
ಮುಂಬೈ: ಟೀಮ್ ಇಂಡಿಯಾದ ಅವಕಾಶ ವಂಚಿತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡದ ಮಾಜಿ ನಾಯಕ ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಿದ್ದಾರೆ. ಕಳೆದ ವರ್ಷ ವಿಶ್ವಕಪ್ ಟೂರ್ನಿ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ, ಮಾರ್ಚ್ 29ರಂದು ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಕಮ್‌ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದರು. ಆದರೆ, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯ 13ನೇ ಆವೃತ್ತಿಯನ್ನು ಮುಂದಿನ ಆದೇಶದವರೆಗೆ ರದ್ದು ಪಡಿಸಲಾಗಿದೆ. ಇದರೊಂದಿಗೆ ಐಪಿಎಲ್ ಮೂಲಕ ಭಾರತ ತಂಡಕ್ಕೆ ಮರಳುವುದನ್ನು ಎದುರು ನೋಡುತ್ತಿದ್ದ ಧೋನಿ ಲೆಕ್ಕಾಚಾರಗಳು ಬುಡಮೇಲಾಗಿವೆ. ಐಪಿಎಲ್ ನಡೆಯದೇ ಇದ್ದರೆ ಭಾರತ ತಂಡಕ್ಕೆ ಕ್ಯಾಪ್ಟನ್ ಕೂಲ್ ಮರಳುವುದು ಅಸಾಧ್ಯವಾಗಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಜೊತೆಗೆ ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಮಾತನಾಡಿದ ಹರ್ಭಜನ್, "ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸ ಶಿಬಿರದಲ್ಲಿ ಇದ್ದಾಗ ಪ್ರತಿಯೊಬ್ಬರು ಕೂಡ ನನ್ನ ಬಳಿಕ ಧೋನಿ ಬಗ್ಗೆ ಕೇಳುತ್ತಿದ್ದರು. ಆದರೆ ಧೋನಿ ಲೆಕ್ಕಾಚಾರಗಳು ನನಗೆ ತಿಳಿದಿಲ್ಲ ಎಂದೇ ಹೇಳುತ್ತಿದ್ದೆ. ಏಕೆಂದರೆ ಭಾರತ ತಂಡದಲ್ಲಿ ಮರಳಿ ಆಡಬೇಕೊ ಬೇಡವೋ ಎಂಬುದನ್ನು ಅವರೇ ನಿರ್ಧರಿಸಬೇಕು," ಎಂದಿದ್ದಾರೆ. "ಆದರೆ, ಅವರ ಬಗ್ಗೆ ನನಗೆ ತಿಳಿದಿರುವ ಪ್ರಕಾರ ಧೋನಿ ಮರಳಿ ಭಾರತ ತಂಡದ ಸಮವಸ್ತ್ರ ತೊಡುವುದಿಲ್ಲ. ಐಪಿಎಲ್ ಟೂರ್ನಿಗಳಲ್ಲಿ ಅವರು ಆಡುತ್ತಾರೆ. ಆದರೆ ಭಾರತ ತಂಡದ ಪರ ಆಡುವುದಿಲ್ಲ. ಏಕೆಂದರೆ 2019ರ ವಿಶ್ವಕಪ್ ಟೂರ್ನಿಯೇ ಕೊನೆ ಎಂದು ಅವರು ನಿರ್ಧರಿಸಿದ್ದರು," ಎಂದು ಹರ್ಭಜನ್ ಹೇಳಿದ್ದಾರೆ. ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಿದ ಭಜ್ಜಿ ಇದೇ ವೇಳೆ ತಮ್ಮ ವೃತ್ತಿ ಬದುಕಿನ ದಿನಗಳಲ್ಲಿ ಎದುರಾದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ಗಳು ಯಾರು ಎಂಬುದನ್ನೂ ಟರ್ಬನೇಟರ್ ಖ್ಯಾತಿಯ ಆಫ್ ಸ್ಪಿನ್ನರ್ ಬಾಯ್ಬಿಟ್ಟಿದ್ದಾರೆ. "ಜಾಕ್ ಕಾಲಿಸ್, ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ಇಂಝಮಾಮ್ ಉಲ್ ಹಕ್ ಮತ್ತು ಯೂನಿಸ್ ಖಾನ್ ಎದುರು ಬೌಲಿಂಗ್ ಮಾಡುವುದು ಬಹಳ ಕಷ್ಟ," ಎಂದು ಹೇಳಿಕೊಂಡಿದ್ದಾರೆ. ಭಜ್ಜಿ ಭಾರತ ತಂಡದ ಪರ ಟೆಸ್ಟ್‌ನಲ್ಲಿ 417 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 239 ವಿಕೆಟ್‌ಗಳನ್ನು ಪಡೆದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2VWYLV8