ಬೆಂಗಳೂರು: ಕೊರೊನಾ ಸೋಂಕು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹಣಕಾಸು ಸಹಾಯವನ್ನು ಸಾಕಷ್ಟು ಜನರು ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಡಿರುವ ಮನವಿಗೆ ಶಾಸಕರು, ಸಚಿವರು ಸ್ಪಂದಿಸುತ್ತಿದ್ದಾರೆ. ಸ್ವತಃ ಸಿಎಂ ಬಿಎಸ್‌ವೈ ತಮ್ಮ ಒಂದು ವರ್ಷದ ವೇತನವನ್ನು ಕೊರೊನಾ ನಿಧಿಗಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರೊಬ್ಬರು ನೀಡಿರುವ ಸಲಹೆ ಸಾಕಷ್ಟು ಗಮನಸೆಳೆಯುತ್ತಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿರುವ ರವಿ ಕೃಷ್ಣಾರೆಡ್ಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಾಜಕಾರಣಿಗಳಿಗೆ ನೀಡಿರುವ ಸಲಹೆ ಸದ್ದು ಮಾಡುತ್ತಿದೆ. ಕೊರೊನಾ ನಿಧಿಗಾಗಿ ಮುಖ್ಯಮಂತ್ರಿ ಬಿಎಸ್‌ವೈ ಸೇರಿದಂತೆ ಶಾಸಕರು, ಸಂಸದರು ತಮ್ಮ ಸಂಬಳದ ದುಡ್ಡನ್ನು ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸ್ವಾಮಿ, ದಯವಿಟ್ಟು ಸಂಬಳ ತೆಗೆದುಕೊಳ್ಳಿ! ಆದರೆ ಈ ಒಂದು ವರ್ಷ ಯಾವುದೇ ಭ್ರಷ್ಟಾಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಕೊರೊನಾ ನಿಧಿಗಾಗಿ ವೇತನ ನೀಡುವ ರಾಜಕಾರಣಿಗಳೇ ಲಂಚ ತೆಗೆದುಕೊಳ್ಳಬೇಡಿ, ಕಮೀಷನ್ ಪಡೆಯಬೇಡಿ, ಸಾರ್ವಜನಿಕ ಆಸ್ತಿಗಳನ್ನು ಹೊಡೆಯಲು ಪ್ರಯತ್ನಿಸಬೇಡಿ, ಬೇಕಾದವರಿಗೆ ಅಕ್ರಮ ಲಾಭಗಳನ್ನು ಮಾಡಿಕೊಡಬೇಡಿ, ಸಾವಿರಾರು ಕೋಟಿ ರೂಪಾಯಿಗಳ ಅನಗತ್ಯ ಯೋಜನೆಗಳಿಗೆ ದುಡ್ಡು ವ್ಯಯಿಸಬೇಡಿ, ಸುಳ್ಳು ಬಿಲ್‌ಗಳ ಮೂಲಕ ಹಣ ಎಗರಿಸಬೇಡಿ ಎಂದಿದ್ದಾರೆ. ದಯವಿಟ್ಟು ಇಷ್ಟು ಮಾಡಿ. ಆಗ ಈ ಕಠಿಣ ಪರಿಸ್ಥಿತಿಯಲ್ಲಿಯೂ ಸರ್ಕಾರದ ಬಳಿ ಖರ್ಚು ಮಾಡಲಾಗದಷ್ಟು ದುಡ್ಡು ಇರುತ್ತದೆ. ಸಾಲದೇ ಬಂದರೆ ಆಗ ಜನರೇ ಹೊಟ್ಟೆಬಟ್ಟೆ ಕಟ್ಟಿಯಾದರೂ ಕೊಡುತ್ತಾರೆ ಎಂದು ವ್ಯಂಗ್ಯದ ರೂಪದಲ್ಲಿ ರಾಜಕಾರಣಿಗಳಿಸಿ ಬಿಸಿ ಮುಟ್ಟಿಸಿದ್ದಾರೆ.
from India & World News in Kannada | VK Polls https://ift.tt/2X6eYJQ