
(ತಮಿಳುನಾಡು): ಲಾಕ್‌ಡೌನ್ ಜಾರಿಯಲ್ಲಿರುವಾಗ ಬೇಕಾಬಿಟ್ಟಿ ಅಡ್ಡಾಡಬೇಡಿ, ಮನೆಯಿಂದ ಹೊರಗೆ ಬರಬೇಡಿ, ಅಗತ್ಯವಸ್ತು ಖರೀದಿಗೆ ಮನೆಯಿಂದ ಹೊರಗೆ ಬಂದಾಗ ಮಾಸ್ಕ್ ಧರಿಸಿ ಎಂದು ಪೊಲೀಸರು ಹೇಳಿದ್ದಷ್ಟೇ.. ಬಿಸಿಲಿನಲ್ಲಿ ನಿಂತು ಬುದ್ದಿ ಹೇಳುವ ಪೊಲೀಸರ ಮಾತಿಗೆ ಯಾರೂ ಸೊಪ್ಪು ಹಾಕುತ್ತಿಲ್ಲ. ಒಂದು ಹಂತದಲ್ಲಿ ಪೊಲೀಸರು ಜನರಿಗೆ ಲಾಠಿ ಬೀಸಿದ್ದಾಯ್ತು, ಹಲವು ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾಯ್ತು.. ಏನು ಮಾಡಿದ್ರೂ ಬುದ್ದಿ ಕಲಿಯದ ಜನರಿಗೆ ಪೊಲೀಸರು ಶಾಕ್ ಟ್ರೀಟ್‌ಮೆಂಟ್ ಕೊಟ್ಟಿದ್ದಾರೆ..! ಪುಂಡ ಯುವಕರಿಗೆ ಶಾಕಿಂಗ್ ಪಾಠ..! ತಮಿಳುನಾಡಿನ ತಿರುಪ್ಪೂರಿನ ಸರ್ಕಲ್‌ನಲ್ಲಿ ಎಂದಿನಂತೆ ಪೊಲೀಸರು ತಪಾಸಣೆಗೆ ನಿಂತಿದ್ದರು. ಈ ವೇಳೆ ಮೂವರು ಸ್ಕೂಟರ್ ಏರಿ ಅತಿ ವೇಗದಲ್ಲಿ ಬಂದರು. ಅವರನ್ನು ತಡೆದ ಪೊಲೀಸರು ಎಲ್ಲಿಗೆ ಹೋಗ್ತಿದ್ದೀರಿ..? ಏನು ಕೆಲಸ ಎಂದು ವಿಚಾರಿಸಿದರು.. ಮಾಸ್ಕ್ ಕೂಡಾ ಧರಿಸದೆ ಸ್ಟೈಲಾಗಿ ನಿಂತು ಪೊಲೀಸರ ಮುಂದೆ ಪೋಸ್ ಕೊಟ್ಟ ಯುವಕರು ಕೆಲಸಕ್ಕೆ ಬಾರದ ಉಡಾಫೆ ಉತ್ತರಗಳನ್ನು ಕೊಡುತ್ತಿದ್ದರು. ಅವರಿಗೆ ಕೊರೊನಾ ವೈರಸ್ ಬಗ್ಗೆ ಯಾವುದೇ ಗಂಭೀರತೆಯಾಗಲೀ, ಜಾಗೃತಿಯಾಗಲೀ ಇದ್ದಂತೆ ಕಾಣಲಿಲ್ಲ. ಹೀಗಾಗಿ ಪೊಲೀಸರು ಪಾಠ ಕಲಿಸಲೇಬೇಕೇಂದು ನಿರ್ಧರಿಸಿದರು..! ಪೊಲೀಸರು ಕಾವಲು ಕಾಯುತ್ತಾ ನಿಂತಿದ್ದ ಸರ್ಕಲ್ ಬಳಿಯಲ್ಲೇ ಆಂಬುಲೆನ್ಸ್ ಒಂದು ನಿಂತಿತ್ತು. ಲೇಡಿ ಪೊಲೀಸ್ ಅಧಿಕಾರಿ ತಮ್ಮ ತಂಡಕ್ಕೆ ಈ ಮೂವರನ್ನೂ ಹಿಡಿದು ಆಂಬುಲೆನ್ಸ್ ಒಳಗೆ ತುಂಬುವಂತೆ ಹೇಳಿದರು. ಆ ಆಂಬುಲೆನ್ಸ್ ಒಳಗೆ ಕೊರೊನಾ ವೈರಸ್ ವ್ಯಕ್ತಿ ಇದ್ದ..! ಯಾವಾಗ ಆಂಬುಲೆನ್ಸ್ ಒಳಗೆ ಕೊರೊನಾ ಸೋಂಕಿತ ಇದ್ದಾನೆ ಎಂದು ಗೊತ್ತಾಯ್ತೋ, ಯುವಕರ ಜಂಘಾಬಲವೇ ಉಡುಗಿಹೋಯ್ತು. ಹೆದರಿ ಕಣ್ಣೀರಿಡಲು ಆರಂಭಿಸಿದ ಯುವಕರು, ಆಂಬುಲೆನ್ಸ್ ಒಳಗೆ ಹತ್ತೋದಿಲ್ಲ ಎಂದು ಕೈ, ಕಾಲು ಹಿಡಿದು ಬೇಡಿಕೊಳ್ಳಲು ಮುಂದಾದ್ರು..! ಇಷ್ಟೆಲ್ಲಾ ಆದ್ರೂ ಪೊಲೀಸರು ಮಾತ್ರ ಬಿಡಲೇ ಇಲ್ಲ..! ಯುವಕರ ಹೆಡೆಮುರಿಕಟ್ಟಿ ಆಂಬುಲೆನ್ಸ್ ಒಳಗೆ ತುಂಬಿದರು. ಅದರೊಳಗೆ ಆಗಲೇ ಇದ್ದ ಕೊರೊನಾ ಸೋಂಕಿತ ಎದ್ದು ಕೂತಿದ್ದ..! ಆತನನ್ನ ನೋಡಿದ ಯುವಕರು ಇನ್ನಷ್ಟು ಹೆದರಿದರು..! ಆಂಬುಲೆನ್ಸ್‌ನಿಂದ ತಪ್ಪಿಸಿಕೊಂಡು ಓಡಿ ಹೋಗಲೇಬೇಕೆಂದು ನಾನಾ ಸಾಹಸಗಳನ್ನ ಮಾಡಿದರು. ಆಂಬುಲೆನ್ಸ್ ಕಿಟಕಿಯಿಂದ ಹೊರಬರಲು ಯತ್ನಿಸಿದರು. ಆದ್ರೆ, ಪೊಲೀಸರು ಬಿಡಲೇ ಇಲ್ಲ.. ಬಿ ಕೂಲ್.. ಆತ ಕೊರೊನಾ ಸೋಂಕಿತ ಅಲ್ಲ..! ಇಷ್ಟೆಲ್ಲಾ ರಂಪಾಟವನ್ನೂ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಇದಾದ ಬಳಿಕ, ಯುವಕರಿಗೆ ಆಂಬುಲೆನ್ಸ್ ಒಳಗಿರುವ ವ್ಯಕ್ತಿ ಕೊರೊನಾ ಸೋಂಕಿತ ಅಲ್ಲ ಎಂದು ಪೊಲೀಸರು ಮನವರಿಕೆ ಮಾಡಿ, ಸಮಾಧಾನ ಹೇಳಿದರು. ಬಳಿಕ, ಬೇಕಾಬಿಟ್ಟಿ ಅಡ್ಡಾಡದಂತೆ ಬುದ್ದಿ ಹೇಳಿ ಮನೆಗೆ ಕಳಿಸಿದರು. ಯುವಕರಂತೂ ಸತ್ತೆವೋ, ಕೆಟ್ಟೆವೋ ಎಂದು ಎದ್ದೂ ಬಿದ್ದು ಮನೆ ಕಡೆ ಓಡಿ ಹೋದರು. ಬಳಿಕ, ಮಾಧ್ಯಮಗಳಿಗೆ ವಿಡಿಯೋ ಪ್ರಕಟಿಸಿದ ತಿರುಪ್ಪೂರು ಎಸ್ಪಿ ದಿಶಾ ಮಿತ್ತಾ ಅವರು, ಆಂಬುಲೆನ್ಸ್‌ನಲ್ಲಿ ಇದ್ದ ವ್ಯಕ್ತಿ ಕೊರೊನಾ ಸೋಂಕಿತನಲ್ಲ. ಆತ ಆ ರೀತಿ ನಟಿಸುತ್ತಿದ್ದ ಅಷ್ಟೇ. ಜನರಿಗೆ ಜಾಗೃತಿ ಮೂಡಿಸಲು ನಾವು ಹೀಗೆ ಮಾಡಿದೆವು ಎಂದು ಸ್ಪಷ್ಟನೆ ನೀಡಿದ್ದಾರೆ.
from India & World News in Kannada | VK Polls https://ift.tt/2VwsPbg