
ಬೆಂಗಳೂರು: ಕೊರೊನಾ ಸಂಕಷ್ಟದಿಂದ ಕಂಗಾಲಾಗಿರುವ ಬಡವರಿಗೆ ಅನುಕೂಲವಾಗಲಿ ಎಂಬ ಉದ್ಧೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಬಂದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕಾಂಗ್ರೆಸ್ ದಾಖಲೆಗಳ ಸಹಿತವಾಗಿ ಬಯಲುಗೊಳಿಸಿದೆ. ಹರಿಯಾಣ ಸರ್ಕಾರದ ಮುದ್ರೆ ಇರುವ 1879 ಕ್ವಿಂಟಾಲ್ ಅಕ್ಕಿ ಮೂಟೆಗಳನ್ನು ಸರ್ಜಾಪುರದ ಅಕ್ರಮ ಗೊದಾಮಿನಲ್ಲಿ ಇಡಲಾಗಿದ್ದು, ಇದನ್ನು ತಮಿಳುನಾಡಿನ ವರ್ತಕರಿಗೆ ಮಾರಾಟ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರ ತಂಡ ಪತ್ತೆ ಹಚ್ಚಿದೆ. ಈ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅಕ್ರಮ ಅಕ್ಕಿ ಮಾರಾಟದ ಹಿಂದೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಬ್ಬರ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದೆ ಎಂಬ ಸುಳಿವಿನ ಆಧಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಮಾಹಿತಿ ಕಲೆ ಹಾಕಿತ್ತು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಇದರ ಸಂಪೂರ್ಣ ವಿಡಿಯೋ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಡಿಕೆಶಿ ಬಿಡುಗಡೆಗೊಳಿಸಿದರು. ಅಕ್ರಮ ದಾಸ್ತಾನು, ಮಾರಾಟದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಂಗ ತನಿಖೆಗೆ ವಹಿಸಬೇಕು, ತಪ್ಪಿತಸ್ಥರು ಯಾರೇ ಆಗಿದ್ದರೂ ಪಕ್ಷಪಾತ ಮಾಡದೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೊರೊನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಂಚಲು ರಾಜ್ಯಕ್ಕೆ ತಂದಿದ್ದ ಅಕ್ಕಿಯನ್ನು ತಮಿಳುನಾಡಿನ ವರ್ತಕರಿಗೆ ಮಾರಾಟ ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋದಾಮಿನಲ್ಲಿ ಅಕ್ಕಿಯ ಮೂಟೆಗಳು ಹೇಗೆ, ಎಲ್ಲಿಂದ ಬಂದವು, ಯಾರು ತಂದಿದ್ದು ಎನ್ನುವ ಮಾಹಿತಿ ತಮಗಿಲ್ಲ ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಲಿಯ ತಾಲೂಕು ದಂಡಾಧಿಕಾರಿಗಳೇ ಹೇಳುತ್ತಿದ್ದಾರೆ. ಹಾಗಾಗಿ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಅಕ್ಕಿ ಅಕ್ರಮ ದಾಸ್ತಾನು, ಮಾರಾಟದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಂಗ ತನಿಖೆಗೆ ವಹಿಸಬೇಕು,ತಪ್ಪಿತಸ್ಥರು ಯಾರೇ ಆಗಿದ್ದರೂ ಪಕ್ಷಪಾತ ಮಾಡದೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ, ಈ ಆಪಾದನೆಗಳು ಮುಖ್ಯಮಂತ್ರಿಗಳ ಕೊರಳನ್ನೇ ಸುತ್ತಿಕೊಳ್ಳಲಿವೆ ಎಂದು ಎಚ್ಚರಿಸಿದ್ದಾರೆ.
from India & World News in Kannada | VK Polls https://ift.tt/2KuQLp9